ಕರ್ನಾಟಕದ ಎಲ್ಲ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ನಡೆದ ಅಹೋರಾತ್ರಿ ಧರಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಸೇರಿದಂತೆ ಹಲವರು ಭಾಗಿಯಾದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಒಳಗೊಂಡ ದ್ವಿಭಾಷಾ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಗಳೂರಿನಲ್ಲಿ ಗುರುವಾರ ಅಹೋರಾತ್ರಿ ಧರಣಿ ನಡೆಸಲಾಯಿತು.
ಸ್ವಾತಂತ್ರ್ಯ ಉದ್ಯಾನದಲ್ಲಿ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸಿ, ಶಿಕ್ಷಣ ತಜ್ಞ ಪ್ರೊ.ಸುಖದೇವ ಥೋರಟ್ ನೇತೃತ್ವದ ಸಮಿತಿ ಇತ್ತೀಚಿಗೆ ಸಲ್ಲಿಸಿದ ವರದಿಯಲ್ಲಿ ಭಾಷಾ ನೀತಿ ಜಾರಿ ವಿಚಾರವಾಗಿ ಸ್ಪಷ್ಟವಾಗಿ ಶಿಫಾರಸುಗಳನ್ನು ಮಾಡಿದೆ. ಇದನ್ನು ಜಾರಿಗೊಳಿಸಿ ಕನ್ನಡಕ್ಕೆ ಗೌರವ ನೀಡ ಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
2024-25ನೇ ಸಾಲಿನಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಮೊದಲ ಅಥವಾ ಎರಡನೇ ಭಾಷೆಯನ್ನಾಗಿ ಕಲಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಎಂಟನೇ ತರಗತಿಗೆ ಮೂರನೇ ಭಾಷೆಯಾಗಿ ಕನ್ನಡದ ಪಠ್ಯ ಪುಸ್ತಗಳನ್ನು ಮುದ್ರಿಸದಿರಲು ನಿರ್ಧರಿಸಿದೆ. ಆದರೆ ಈ ಮಾದರಿಯ ಶಾಲೆಗಳು ಕನ್ನಡವನ್ನು ಕಲಿಸದೇ ನ್ಯಾಯಾಲಯದ ಮೊರೆ ಹೋಗಿ ಸರ್ಕಾರಕ್ಕೆ ಸೆಡ್ಡು ಹೊಡೆಯುತ್ತಿವೆ. ಕನ್ನಡ ಕಲಿಸದ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ನಾರಾಯಣಗೌಡ, ಥೋರಟ್ ಸಮಿತಿ ಕನ್ನಡವನ್ನು ಮಾತೃಭಾಷೆ ಹಾಗೂ ಇಂಗ್ಲಿಷ್ ಅನ್ನು ಕಲಿಕೆಯ ಭಾಷೆಯಾಗಿ ಗುರುತಿಸಿದೆ. ಈ ಗೊಂದಲಕ್ಕೆ ಅವಕಾಶ ನೀಡದೇ ಕನ್ನಡ ಮತ್ತು ಇಂಗ್ಲಿಷ್ ಎರಡೂ ಒಳಗೊಂಡ ಭಾಷಾ ನೀತಿ ಜಾರಿಗೆ ತಂದು ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಅವಕಾಶ ಮಾಡಿಕೊಡಬಾರದು. ಸದ್ಯ ಇರುವ ತ್ರಿಭಾಷಾ ಸೂತ್ರವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಹಿಂದಿ ಹೇರುವ ಮೂಲಕ ಆ ಭಾಷೆಯೇ ಉನ್ನತವೆಂದು ಎತ್ತಿ ಹಿಡಿಯುವ ಪ್ರಯತ್ನಗಳು ಹಿಂದಿ ನಿಂದಲೂ ನಡೆದಿವೆ. ಹಿಂದಿಯ ಜತೆಗೆ 3ನೇ ಭಾಷೆಯಾಗಿ ಫ್ರೆಂಚ್, ರಷ್ಯನ್, ಜರ್ಮನ್ ಭಾಷೆ ಕಲಿಕೆಗೂ ಅವಕಾಶ ಮಾಡಿಕೊಡುವ ಬಗ್ಗೆಯೂ ಯೋಚಿಸ ಬೇಕು ಎಂದು ಒತ್ತಾಯಿಸಿದರು.
ಕನ್ನಡ ಮತ್ತು ಇಂಗ್ಲಿಷ್ ಒಳಗೊಂಡ ದ್ವಿಭಾಷಾ ನೀತಿ ಜಾರಿಗೊಳಿಸಿ
ಕನ್ನಡ ಕಲಿಸದ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಿ
ಹಿಂದಿ ಹೇರಿಕೆಗೆ ಅವಕಾಶ ಬೇಡ
ತ್ರಿಭಾಷಾ ಸೂತ್ರದಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಲಾಗುತ್ತಿದೆ. ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿಂದಿ ವಿಷಯದಲ್ಲಿ ಸುಮಾರು 90 ಸಾವಿರ ಮಕ್ಕಳು ಅನುತ್ತೀರ್ಣರಾಗಿದ್ದಾರೆಟಿ.ಎ.ನಾರಾಯಣಗೌಡ, ಕರವೇ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.