
ಬೆಂಗಳೂರು: ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆಯು ಉನ್ನತ ಮಟ್ಟದ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ಈ ಅಭಿಯಾನವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಮತ್ತು ನಿಯಮಗಳನ್ನು ಅನುಸರಿಸಿ ಅನುಷ್ಠಾನಗೊಳಿಸಲು, ₹139.53 ಕೋಟಿಯ ಸಮಗ್ರ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಹತ್ತು ಮಂದಿಯನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.
ರಾಜ್ಯದಲ್ಲಿ ತಾಯಂದಿರ ಮರಣಕ್ಕೆ ಕಾರಣಗಳನ್ನು ಪರಿಶೀಲಿಸಿ, ತಡೆಗಟ್ಟುವ ಕ್ರಮಗಳನ್ನು ಸಮಿತಿ ಕೈಗೊಳ್ಳಲಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು, ಎಲ್ಲ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಆರೋಗ್ಯ ಸೇವೆಗಳ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು, ವೈದ್ಯಕೀಯ ಸಂಸ್ಥೆಗಳಲ್ಲಿ ತಾಯಂದಿರ ಆರೋಗ್ಯ ಆರೈಕೆಯ ಅಸಮಾನತೆಗಳನ್ನು ಪರಿಹರಿಸುವುದು, ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಬಲಪಡಿಸುವುದು ಸೇರಿ ವಿವಿಧ ಕಾರ್ಯಗಳನ್ನು ಕೈಗೊಳ್ಳುವಂತೆ ಸಮಿತಿಗೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.