ADVERTISEMENT

ಮಲ್ಟಿಪ್ಲೆಕ್ಸ್ ಟಿಕೆಟ್ ದರ: ತಡೆ ತೆರವಿಗೆ ವಿಭಾಗೀಯ ನ್ಯಾಯಪೀಠ ನಕಾರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 15:54 IST
Last Updated 30 ಸೆಪ್ಟೆಂಬರ್ 2025, 15:54 IST
<div class="paragraphs"><p>ಮಲ್ಟಿಪ್ಲೆಕ್ಸ್ </p></div>

ಮಲ್ಟಿಪ್ಲೆಕ್ಸ್

   

ಬೆಂಗಳೂರು: ಮಲ್ಟಿಪ್ಲೆಕ್ಸ್‌ ಸೇರಿದಂತೆ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ ₹200 ಏಕರೂಪ ದರ ನಿಗದಿಪಡಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಏಕಸದಸ್ಯ ನ್ಯಾಯಪೀಠ ನೀಡಿರುವ ಮಧ್ಯಂತರ ತಡೆ ತೆರವುಗೊಳಿಸಲು ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.

ಈ ಸಂಬಂಧ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ, ಕನ್ನಡ ಸಂಘಟನೆಗಳು ಹಾಗೂ ಇತರರು ಸಲ್ಲಿಸಿರುವ ರಿಟ್ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ವಿ. ಲಕ್ಷ್ಮೀನಾರಾಯಣ ಅವರ ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

‘ಮಲ್ಟಿಪ್ಲೆಕ್ಸ್‌ಗಳ ಪ್ರತಿಯೊಂದು ಟಿಕೆಟ್‌ ಮಾರಾಟಕ್ಕೆ (ಜಿಎಸ್‌ಟಿ ಹೊರತುಪಡಿಸಿ) ಸಂಬಂಧಿಸಿದ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು. ಎಲೆಕ್ಟ್ರಾನಿಕ್‌ ಅಥವಾ ನಗದು ಮೂಲಕ ಟಿಕೆಟ್‌ ಬುಕ್‌ ಮಾಡುವ ವಿಧಾನದ ಮೇಲೆ ನಿಗಾ ಇರಿಸಬೇಕು’ ಎಂದು ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಮತ್ತು ಅದರ ಸದಸ್ಯರಿಗೆ ನ್ಯಾಯಪೀಠ ನಿರ್ದೇಶಿಸಿದೆ.

‘ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿರುವ ಮಲ್ಟಿಪ್ಲೆಕ್ಸ್‌ ಮತ್ತು ಪಿವಿಆರ್‌ ಐನಾಕ್ಸ್‌ ಲಿಮಿಟೆಡ್‌ ಕಂಪನಿ ಒಂದು ವೇಳೆ ತಮ್ಮ ಕಾನೂನು ಹೋರಾಟದಲ್ಲಿ ವಿಫಲವಾದರೆ, ಎಲೆಕ್ಟ್ರಾನಿಕ್‌ ರೂಪದಲ್ಲಿ ಸಂಗ್ರಹಿಸಿದ ಮೊತ್ತವನ್ನು ಟಿಕೆಟ್‌ ಬುಕ್‌ ಮಾಡಿದ ವ್ಯಕ್ತಿಗಳಿಗೆ ಹಿಂತಿರುಗಿಸಬಹುದು. ಅಂತಹ ಪ್ರೇಕ್ಷಕರ ಹಿತಾಸಕ್ತಿ ಕಾಪಾಡಲು ಕೋರ್ಟ್‌ ಬಯಸುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ಮೇಲ್ಮನವಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿದೆ. ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್ ಇಸ್ಮಾಯಿಲ್ ಜಬೀವುಲ್ಲಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.