ADVERTISEMENT

ರಾಜಧಾನಿಯ ಒಡಲ ದನಿ: ಬಿಬಿಎಂಪಿಗೆ ಕೋರ್ಟ್‌ನಿಂದ ಪದೇ ಪದೇ ಛೀಮಾರಿ ಏಕೆ?

ಅಭಿವೃದ್ಧಿ ಕಾಮಗಾರಿ: ಬಿಬಿಎಂಪಿ ಕಾರ್ಯವೈಖರಿಗೆ ಹೈಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 21:03 IST
Last Updated 8 ಫೆಬ್ರುವರಿ 2022, 21:03 IST
   

ಬೆಂಗಳೂರು: ರಸ್ತೆಗಳ ಗುಂಡಿ ಮುಚ್ಚುವುದು, ಡಾಂಬರೀಕರಣ, ರಾಜಕಾಲುವೆಗಳ ಒತ್ತುವರಿ ತೆರವು ಸೇರಿದಂತೆ ಯಾವ ಕೆಲಸವೇ ಇದ್ದರೂ ಹೈಕೋರ್ಟ್‌ ಮಧ್ಯ ಪ್ರವೇಶಿಸಿ ಛೀಮಾರಿ ಹಾಕುವವರೆಗೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಸಂಪೂರ್ಣ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಹೀಗೇಕೆ ಮಾಡುತ್ತಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಪಾಲಿಕೆ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರಿಗೆ ಹೈಕೋರ್ಟ್‌ ಸೋಮವಾರ ಛೀಮಾರಿ ಹಾಕಿದೆ. ನಗರದ ಸಮಗ್ರ ಅಭಿವೃದ್ಧಿಯ ಹೊಣೆ ಹೊತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಎಡವುತ್ತಿರುವುದೆಲ್ಲಿ? ಎಂಬುದರ ಕುರಿತು ಪಾಲಿಕೆ ಮಾಜಿ ಮೇಯರ್‌ಗಳು ಈ ವಾರದ ‘ರಾಜಧಾನಿಯ ಒಡಲ ದನಿ’ಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಸ್ವಂತ ಲಾಭವೇ ಸಮಸ್ಯೆಯ ಮೂಲ’
ಪಾಲಿಕೆಯಲ್ಲಿ ಒಂದೂವರೆ ವರ್ಷದಿಂದ ಚುನಾಯಿತ ಸದಸ್ಯರಿಲ್ಲ. ಅಧಿಕಾರಿಗಳೇ ಆಡಳಿತದ ಹೊಣೆ ಹೊತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವುದು ಸೇರಿದಂತೆ ಎಲ್ಲ ಸಮಸ್ಯೆಗಳನ್ನೂ ಗುರುತಿಸಿ, ಪರಿಹರಿಸುವ ಹೊಣೆಅವರದ್ದು. ಆದರೆ,ಅಧಿಕಾರಿಗಳು ಸ್ವಂತಲಾಭಕ್ಕೆ ಆದ್ಯತೆ ಕೊಟ್ಟು, ಜನಹಿತ ಮರೆಯುತ್ತಿದ್ದಾರೆ. ಚುನಾಯಿತ ಸದಸ್ಯರಿದ್ದಾ ವಾರ್ಡ್‌ ಹಂತದ ಅಧಿಕಾರಿಗಳು ಬೆಳಿಗ್ಗೆಯೇ ಕೆಲಸಕ್ಕೆ ಹಾಜರಾಗುತ್ತಿದ್ದರು. ಈಗ ಮಧ್ಯಾಹ್ನ ಬರುವವರೇ ಹೆಚ್ಚು. ಪಾಲಿಕೆ ಮುಖ್ಯ ಆಯುಕ್ತರು, ಆಡಳಿತಾಧಿಕಾರಿ ಕಣ್ಣಿಗೂ ಮಣ್ಣೆರಚಿ ತಪ್ಪಿಸಿಕೊಳ್ಳುತ್ತಾರೆ. ಕೆಳಹಂತದ ಅಧಿಕಾರಿಗಳ ಮೇಲೆ ಬಿಗಿ ಹಿಡಿತ ಇಲ್ಲದ ಕಾರಣ ಹಿರಿಯ ಅಧಿಕಾರಿಗಳು ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ರಸ್ತೆ ಗುಂಡಿ, ಕಾಲುವೆ ಸಮಸ್ಯೆ ಪರಿಹಾರಕ್ಕೆ ತಕ್ಷಣ ಬರುವುದಿಲ್ಲ. ಕಟ್ಟಡ ನಿರ್ಮಿಸುವವರು, ನಕ್ಷೆ ಮಂಜೂರಾತಿ ಕೋರಿದವರ ಬಳಿ ಹೋಗುತ್ತಾರೆ. ರಾತ್ರಿ ವೇಳೆ ಗುತ್ತಿಗೆದಾರರು ಡಾಂಬರು ಹಾಕಿಹೋಗುತ್ತಾರೆ. ಅಧಿಕಾರಿ ನೋಡುವುದಿಲ್ಲ. ಕಮಿಷನ್‌ ಮತ್ತು ಸ್ವಂತ ಲಾಭದ ಆಸೆಯಿಂದ ಅಧಿಕಾರಿಗಳು ಹೊರ ಬರದೇ ಇದ್ದರೆ ಈ ಸ್ಥಿತಿ ಹಾಗೆಯೇ ಇರುತ್ತದೆ.
-ಜೆ. ಹುಚ್ಚಪ್ಪ,ಮಾಜಿ ಮೇಯರ್‌

ADVERTISEMENT

‘ನಾವೇ ರಾಜರು ಎಂಬ ಭಾವನೆ ತೊಲಗಬೇಕು’
ಚುನಾಯಿತ ಕೌನ್ಸಿಲ್‌ ಇಲ್ಲದ ಕಾರಣದಿಂದ ಪಾಲಿಕೆ ಅಧಿಕಾರಿಗಳು ‘ನಾವೇ ರಾಜರು’ ಎಂಬ ಭಾವನೆಯಲ್ಲಿದ್ದಾರೆ. ಜನರು ಸಮಸ್ಯೆ ಹೇಳಿಕೊಂಡು ಹೋದರೂ ತಕ್ಷಣಕ್ಕೆ ಸ್ಪಂದಿಸುವವರೇ ಕಡಿಮೆ. ಕಾಮಗಾರಿಗಳಲ್ಲಿ ಗುಣಮಟ್ಟ ನಿಯಂತ್ರಣಕ್ಕೆ ಆದ್ಯತೆ ಇಲ್ಲ. ಗುತ್ತಿಗೆದಾರರು ಮಾಡಿದ್ದೇ ಕೆಲಸ ಎಂಬ ಸ್ಥಿತಿ ನಿರ್ಮಿಸಿದ್ದಾರೆ. ಇದರಿಂದಾಗಿಯೇ ಪಾಲಿಕೆಯ ಮಾನ ಪದೇ ಪದೇ ಹರಾಜಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿ ಬಿದ್ದರೆ ಗುತ್ತಿಗೆದಾರರು ಜೆಲ್ಲಿ ಮತ್ತು ಕಲ್ಲುಪುಡಿಯ ಮಿಶ್ರಣ ಸುರಿದುಹೋಗುತ್ತಾರೆ. ಅಲ್ಲಿ ಡಾಂಬರು ಹಾಕಿಸುವ ಬಗ್ಗೆ ಅಧಿಕಾರಿಗಳು ಯೋಚಿಸುವುದೇ ಇಲ್ಲ. ರಾತ್ರೋರಾತ್ರಿ ರಸ್ತೆ ಅಗೆದರೂ ಕೇಳುವವವರೇ ಇಲ್ಲ ಎನ್ನುವ ಸ್ಥಿತಿ ಇದೆ. ವಾರ್ಡ್‌ ಹಂತದ ಅಧಿಕಾರಿಗಳು ವಾರಕ್ಕೆ ಒಮ್ಮೆಯಾದರೂ ತಮ್ಮ ವ್ಯಾಪ್ತಿಯಲ್ಲಿ ಸಂಚರಿಸಿದರೆ ಸಮಸ್ಯೆಗಳ ಅರಿವಾಗುತ್ತದೆ. ಆದರೆ, ಅದಕ್ಕೂ ಜನರು ಒತ್ತಾಯಿಸಬೇಕಾದ ಸ್ಥಿತಿಗೆ ಆಡಳಿತ ತಲುಪಿದೆ. ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ಮೇಲೆ ಅಧಿಕಾರಿಗಳಿಗೆ ನಿಯಂತ್ರಣವೇ ಇಲ್ಲ. ಇದು ಸಮಸ್ಯೆಯ ಮೂಲ. ತಮ್ಮನ್ನು ಪ್ರಶ್ನಿಸಲು ಯಾರೂ ಇಲ್ಲ ಎಂಬ ಧೋರಣೆಯನ್ನು ಅಧಿಕಾರಿಗಳು ಬಿಡಬೇಕು. ಆಗ ಮಾತ್ರ ನಗರದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರಕಿಸಲು ಸಾಧ್ಯ.
-ಕಟ್ಟೆ ಸತ್ಯನಾರಾಯಣ,ಮಾಜಿ ಮೇಯರ್‌

‘ಪಾಲಿಕೆ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ’
ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆಯಾಗದೇ ಇರುವುದರಿಂದ ಬಿಬಿಎಂಪಿ ಆಡಳಿತ ಜಡ್ಡುಗಟ್ಟಿ ಹೋಗಿದೆ. ಅಧಿಕಾರಿಗಳು ಜನರಿಗೆ ಸ್ಪಂದಿಸುವುದನ್ನೇ ಮರೆತಿದ್ದಾರೆ. ಯಾವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕೆಂಬುದನ್ನೂ ಅವರು ಯೋಚಿಸುತ್ತಿಲ್ಲ. ಇದರಿಂದಾಗಿ ರಸ್ತೆ ಗುಂಡಿ ವಿಚಾರವನ್ನೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಬೇಕಾದ ದುಸ್ಥಿತಿ ನಗರದ ನಾಗರಿಕರಿಗೆ ಬಂದಿದೆ. ಈಗ ಇರುವ ಎಲ್ಲ ಸಮಸ್ಯೆಗಳೂ ಚುನಾಯಿತ ಸದಸ್ಯರಿದ್ದಾಗಲೂ ಇರುತ್ತಿದ್ದವು. ಆದರೆ, ಪಾಲಿಕೆ ಸದಸ್ಯರು ನಿತ್ಯವೂ ತಮ್ಮ ವಾರ್ಡ್‌ಗಳಲ್ಲಿ ಸಂಚರಿಸುತ್ತಿದ್ದರು. ಸ್ಥಳೀಯರು ಕೂಡ ಸಮಸ್ಯೆಗಳ ಕುರಿತು ಮಾಹಿತಿ ನೀಡುತ್ತಿದ್ದರು. ಎಲ್ಲ ಸದಸ್ಯರೂ ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಪಟ್ಟುಬಿಡದೆ ಅಧಿಕಾರಿಗಳನ್ನು ಕರೆತಂದು ಕೆಲಸ ಮಾಡಿಸುತ್ತಿದ್ದರು. ಈಗ ಅಧಿಕಾರಿಗಳಿಗೆ ಸಮಸ್ಯೆ ಕುರಿತು ಹೇಳಿದರೂ ಕಿವಿ ಮೇಲೆ ಬೀಳದವರಂತೆ ವರ್ತಿಸುತ್ತಾರೆ. ಅರ್ಧಕ್ಕಿಂತ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಧೋರಣೆಯವರೇ ಇದ್ದಾರೆ. ಕೆಳಹಂತದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಪಾಲಿಕೆ ವ್ಯಾಪ್ತಿಯಲ್ಲಿ ಸಮಸ್ಯೆಗಳೇ ಇರುವುದಿಲ್ಲ.
-ಗಂಗಾಂಬಿಕೆ ಮಲ್ಲಿಕಾರ್ಜುನ, ಮಾಜಿ ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.