ADVERTISEMENT

ಗುಂಡಿ ಮುಚ್ಚಲು ಬಿಬಿಎಂಪಿ ವಿಫಲ: ಹೈಕೋರ್ಟ್‌ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:15 IST
Last Updated 27 ಅಕ್ಟೋಬರ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಆದೇಶ ಪಾಲನೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಂಪೂರ್ಣ ವಿಫಲವಾಗಿದೆ‘ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಸಂಬಂಧಿಸಿದಂತೆಕೋರಮಂಗಲದ ವಿಜಯನ್ ಮೆನನ್ ಸೇರಿ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ರಸ್ತೆ ಗುಂಡಿ ಮುಚ್ಚುವುದಕ್ಕಾಗಿ ಈವರೆಗೂ ಬಿಬಿಎಂಪಿ ಕೈಗೊಂಡಿರುವ ಕುರಿತಂತೆ ವಿವರವಾದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ADVERTISEMENT

ಅರ್ಜಿದಾರರ ಪರ ವಕೀಲರು, ‘ನಗರದಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸುತ್ತಿರುವ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕಾಗಿ ಬಿಬಿಎಂಪಿ ಸಮರ್ಪಕ ತಂತ್ರಜ್ಞಾನ ಬಳಕೆ ಮಾಡಿಕೊಂಡಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ’ ಎಂದು ಅಭಿಪ್ರಾಯಪಟ್ಟಿತಲ್ಲದೆ, ‘ಗುಂಡಿಗಳನ್ನು ಮುಚ್ಚಲು ಕೈಗೊಂಡಿರುವ ಕ್ರಮಗಳು ಯಾವುವು?, ಎಷ್ಟು ಗುಂಡಿ ಮುಚ್ಚಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರವಾದ ಪ್ರಮಾಣಪತ್ರ ಸಲ್ಲಿಸಿ’ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.