ADVERTISEMENT

ಇದೇನು ಬಿಹಾರವೇ?: ಪೊಲೀಸ್ ಇಲಾಖೆಗೆ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 6:15 IST
Last Updated 11 ಡಿಸೆಂಬರ್ 2019, 6:15 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: ‘ಇವತ್ತು ವಕೀಲರಿಗೆ ನೋಟಿಸ್ ಕೊಡುತ್ತಾರೆ. ನಾಳೆ ಜಡ್ಜ್‌ಗೂ ಠಾಣೆಗೆ ಬನ್ನಿ ಅಂತಾರೆ. ಈ ಪೊಲೀಸರ ಕೆಲಸ ಏನು, ಇವರು ಮಾಡ್ತಿರೋದೇನು‌, ಇದೇನು ಕರ್ನಾಟಕವೋ ಇಲ್ಲಾ ಬಿಹಾರವೋ...?

ರಾಜ್ಯ ಪ್ರಾಸಿಕ್ಯೂಷನ್‌ ಅನ್ನು ಇಂದು ಬೆಳಗ್ಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಪರಿ ಇದು.

‘ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರು ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕು’ ಎಂದು ವಕೀಲ ಬಿ.ಸುಧಾಕರ್ ಅವರಿಗೆ, ವಿಜಯನಗರ ಠಾಣೆ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೋಟಿಸ್ ನೀಡಿದ್ದರು.

ADVERTISEMENT

ಇದನ್ನು ಪ್ರಶ್ನಿಸಿ ಸುಧಾಕರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರವಿ ವಾದ ಮಂಡಿಸಿ, ಪೊಲೀಸ್ ಅಧಿಕಾರಿಗಳು ಹೇಗೆ ಕಾನೂನು ಬಾಹಿರವಾಗಿ ಅರ್ಜಿದಾರ ವಕೀಲರಿಗೆ ಸಿ.ಆರ್.ಪಿ.ಸಿ. ಕಲಂ 91ರ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ ಎಂಬುದನ್ನು ವಿವರಿಸಿದರು.

ಇದನ್ನು ಆಲಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ವಿಚಾರಣೆಗೆ ಖುದ್ದು ಹಾಜರಾಗಿದ್ದ ವಿಜಯನಗರ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಿ.ಎಚ್.ಸಂತೋಷ್ ಹಾಗೂ ಮತ್ತೊಬ್ಬ ಅಧಿಕಾರಿ ಎಂ.ಎಂ.ಭರತ್‌ ಬೆವರಿಳಿಸಿದರು.

‘ತಮ್ಮ ರಕ್ತ ಕೊಟ್ಟು ಪೊಲೀಸ್ ಇಲಾಖೆ ಗೌರವ ಹೆಚ್ಚಿಸಿದ ಅನೇಕ ಅಧಿಕಾರಿಗಳಿದ್ದಾರೆ. ಆದರೆ, ನಿಮ್ಮಂಥವರು ಸಾರ್ವಜನಿಕರ ರಕ್ತ ಹೀರಿ ಮಾಂಸ ತಿನ್ನಲು ಕುಳಿತಿದ್ದೀರಾ, ಕೋರ್ಟ್ ಇದನ್ನೆಲ್ಲಾ ನೋಡಿಕೊಂಡು ಸುಮ್ಮನೇ ಕೂರಲು ಆಗುವುದಿಲ್ಲ. ಮಧ್ಯಾಹ್ನದೊಳಗೆ ಈ ಅಧಿಕಾರಿಗಳು ಬೇಷರತ್ ಕ್ಷಮಾಪಣೆ ಕೇಳಬೇಕು. ಅದಕ್ಕಾಗಿ ಪ್ರಮಾಣ ಪತ್ರ ಸಲ್ಲಿಸಬೇಕು’ ಎಂದು ಪ್ರಾಸಿಕ್ಯೂಷನ್ ವಕೀಲರಿಗೆ ತಾಕೀತು ಮಾಡಿದರು.

ಅರ್ಜಿದಾರರ ಪರ ಮತ್ತೊಬ್ಬ ವಕೀಲ ಡಿ. ಆರ್.ರವಿಶಂಕರ್, ‘ಈ ಪ್ರಕರಣ ಗಂಭೀರವಾದದ್ದು. ಇದನ್ನು ಹೀಗೆಯೇ ಬಿಡಬಾರದು. ಈ ಅಧಿಕಾರಿಗಳು ನಡೆದುಕೊಂಡಿರುವ ರೀತಿಯನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ವಿಚಾರಣೆ ನಡೆಸಲು ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಪ್ರಾಸಿಕ್ಯೂಷನ್ ಪರ ವಕೀಲರಿಗೆ, ‘ನಿಮ್ಮ ಪೊಲೀಸ್ ಕಮಿಷನರ್ ಯಾರು, ಅವರು ಇದಕ್ಕೆ ಉತ್ತರಿಸಬೇಕು. ಈ ಬಗ್ಗೆ ವಿವರವಾದ ಆದೇಶ ಮಾಡುತ್ತೇನೆ’ ಎಂದು ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.