ಬೆಂಗಳೂರು: ‘ಕೆಪಿಸಿಎಲ್‌ನಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) 56ನೇ ಸಂಸ್ಥಾಪನಾ ದಿನಾಚರಣೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಿರುವುದರಿಂದ ಕೆಲಸಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಮನವಿಗಳು ಬಂದಿವೆ. ಇಂಧನ ಸಚಿವರು ಮತ್ತು ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿ ಹುದ್ದೆ ಭರ್ತಿ ಮಾಡಲಾಗುವುದು’ ಎಂದರು.
ಜಲ, ಉಷ್ಣ, ಸೌರ, ಪವನ, ಅನಿಲ ಮಾತ್ರವಲ್ಲ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದಿಸುವ ಮೂಲಕ ಕೆಪಿಸಿಎಲ್ ಅತ್ಯುತ್ತಮ ಸಾಧನೆ ಮಾಡಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕವು ಸ್ವಾವಲಂಬಿ ರಾಜ್ಯವಾಗಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವ ಸಂದರ್ಭದಲ್ಲಿಯೂ ವಿದ್ಯುತ್ ಕೊರತೆ ಆಗದಂತೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ‘ವಿದ್ಯುತ್ ಉತ್ಪಾದನೆ ಬೇಕಾದಷ್ಟಿದ್ದರೂ ಸಂಗ್ರಹಣಾ ವ್ಯವಸ್ಥೆ ಇಲ್ಲ. ಹೀಗಾಗಿ ಶರಾವತಿಯಲ್ಲಿ 2,000 ಮೆಗಾವ್ಯಾಟ್ ಹಾಗೂ ವಾರಾಹಿಯಲ್ಲಿ 1,500 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆ ಮೂಲಕ ವಿದ್ಯುತ್ ಸಂಗ್ರಹಿಸಿ ಹೆಚ್ಚು ಬೇಡಿಕೆ ಸಂದರ್ಭದಲ್ಲಿ ಪೂರೈಸಲಾಗುವುದು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಜ್ಯ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳಿಂದ ಈಗಾಗಲೇ ಅನುಮತಿ ಸಿಕ್ಕಿದೆ’ ಎಂದು ಹೇಳಿದರು.
ಕೆಪಿಸಿಎಲ್‌ನಲ್ಲಿ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಅಭಿನಂದಿಸಲಾಯಿತು. ನಿವೃತ್ತ ಸಿಬ್ಬಂದಿಯನ್ನು ಗೌರವಿಸಲಾಯಿತು. ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ನಿಗಮದ ಸಿಬ್ಬಂದಿಯ ಮಕ್ಕಳಿಗೆ ಚಿನ್ನದ ನಾಣ್ಯ ನೀಡಿ ಪುರಸ್ಕರಿಸಲಾಯಿತು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಬಸವನಗೌಡ ದದ್ದಲ್, ಪ್ರಸಾದ್ ಅಬ್ಬಯ್ಯ, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಮನೋಹರ್, ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್. ನಾಗರಾಜ, ತಾಂತ್ರಿಕ ನಿರ್ದೇಶಕ ಎಸ್ .ಕೃಷ್ಣಮೂರ್ತಿ, ಮುಖ್ಯ ಜಾಗೃತ ಅಧಿಕಾರಿ ಟಿ.ಪಿ. ಶಿವಕುಮಾರ್ ಭಾಗವಹಿಸಿದ್ದರು.
ಸೀಮೆ ಎಣ್ಣೆ ದೀಪದಡಿ ಓದು ‘ನಮ್ಮೂರಲ್ಲಿ ವಿದ್ಯುತ್ ಇರಲಿಲ್ಲ. ಸೀಮೆ ಎಣ್ಣೆ ದೀಪ ಇಟ್ಟುಕೊಂಡು ಓದಿದ್ದೆವು. 7-8ನೇ ತರಗತಿಯಲ್ಲಿರುವಾಗ ನಮ್ಮ ಊರಿಗೆ ವಿದ್ಯುತ್ ಬಂತು. ಕೆಪಿಸಿಎಲ್ ಪ್ರಮುಖ ಪಾತ್ರ ವಹಿಸಿದ್ದರಿಂದ ಇಂದು ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮವೇ ಇಲ್ಲ. ಕೆಪಿಸಿಎಲ್‌ನ ಅಧ್ಯಕ್ಷನಾಗಿ ನಾನೂ ನಿಮ್ಮವನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಂಕಿ ಅಂಶ 37009 ಯೂನಿಟ್ 2024-25ನೇ ಸಾಲಿನಲ್ಲಿ ಉತ್ಪಾದನೆಯಾದ ದಾಖಲೆ ಪ್ರಮಾಣದ ವಿದ್ಯುತ್ ಶೇ 40 ರಾಜ್ಯದಲ್ಲಿರುವ ಬೇಡಿಕೆಯಲ್ಲಿ ಕೆಪಿಸಿಎಲ್ ಉತ್ಪಾದಿಸುವ ವಿದ್ಯುತ್ ಪ್ರಮಾಣ ₹ 20000 ಕೋಟಿ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ನೀಡುತ್ತಿರುವ ಸಬ್ಸಿಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.