ADVERTISEMENT

ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಮಕ್ಕಳಿಗೆ ಚಿತ್ರಕಲಾ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 16:19 IST
Last Updated 18 ಡಿಸೆಂಬರ್ 2025, 16:19 IST
ಕಾರ್ಯಾಗಾರದಲ್ಲಿ ಪ.ಸ. ಕುಮಾರ್ ಮತ್ತು ಇತರರು ಕಲಾಕೃತಿಗಳನ್ನು ವೀಕ್ಷಿಸಿದರು
ಕಾರ್ಯಾಗಾರದಲ್ಲಿ ಪ.ಸ. ಕುಮಾರ್ ಮತ್ತು ಇತರರು ಕಲಾಕೃತಿಗಳನ್ನು ವೀಕ್ಷಿಸಿದರು   

ಬೆಂಗಳೂರು: ‘ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಆದ್ದರಿಂದ ಪ್ರತಿ ತಿಂಗಳು ಮಕ್ಕಳ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಹೇಳಿದರು.

ಅಕಾಡೆಮಿಯು ನಗರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಚಿತ್ರ ಕಲಾವಿದರನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸ ಅಷ್ಟಾಗಿ ಆಗುತ್ತಿಲ್ಲ. ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಿದಲ್ಲಿ ಈ ಕ್ಷೇತ್ರಕ್ಕೆ ಬರುವವರ ಸಂಖ್ಯೆಯೂ ಹೆಚ್ಚುತ್ತದೆ. ಆದ್ದರಿಂದ ಮಕ್ಕಳಿಗೆ ಚಿತ್ರಕಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ಕಲೆಯಲ್ಲಿ ಆಸಕ್ತಿ ಇರುವ ಮಕ್ಕಳು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು. 

ADVERTISEMENT

ಕಲಾವಿದ ಅನಿಲ್ ಕುಮಾರ್ ಎಚ್.ಎ., ‘ಈ ಕಾಲಘಟ್ಟದಲ್ಲಿ ಕಲಾಕೃತಿಗಳ ರಚನೆ ಮತ್ತು ಕಲಾ ವಿಮರ್ಶೆ ಕಡಿಮೆಯಾಗುತ್ತಿದೆ. ಕಲಾ ಕ್ಷೇತ್ರದಲ್ಲಿಯೂ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ಸಾಂಪ್ರದಾಯಿಕ ಕಲಾ ಪ್ರಕಾರವು ತನ್ನದೆ ಆದ ಮಹತ್ವ ಮತ್ತು ಬೇಡಿಕೆಯನ್ನು ಹೊಂದಿದೆ. ಕಲಾವಿದರು ಕುಂಚ ಹಿಡಿದು ಕಲಾಕೃತಿಗಳ ರಚನೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು. 

ಬರಹಗಾರ್ತಿ ನಳಿನಿ ಮಾಳವೀಯ, ‘ಕಲಾಕೃತಿಗಳ ಬಗೆಗೆ ಪ್ರೇಕ್ಷಕರ ಅಭಿರುಚಿ ಹಾಗೂ ದೃಷ್ಟಿಕೋನ ಬದಲಾಗುತ್ತಿದೆ. ಆದ್ದರಿಂದ ಈ ಸಂದರ್ಭದಲ್ಲಿ ಕಲಾವಿದನೂ ಪ್ರೇಕ್ಷಕರ ಇಚ್ಛೆಯಂತೆ ಕಲಾಕೃತಿಗಳ ರಚನೆಗೆ ಆದ್ಯತೆ ನೀಡಬೇಕು’ ಎಂದರು. 

ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತ, ಇನರಾ ಆರ್ಟ್ ಸ್ಪೇಸ್‌ನ ನಿರ್ದೇಶಕ ಮಧು ಆರ್ಯ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.