
ಬೆಂಗಳೂರು: ರಾಜ್ಯದ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪೀಕ್ ಕ್ಯಾಪ್’ಗಳನ್ನು ವಿತರಣೆ ಮಾಡಲಾಗುತ್ತಿದೆ. ಹೊಸ ಟೋಪಿಗಳು ಅಕ್ಟೋಬರ್ 28ರಿಂದಲೇ ಪೊಲೀಸರ ಕೈಸೇರಲಿವೆ.
ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಹೊಸ ಕ್ಯಾಪ್‌ಗಳನ್ನು ವಿತರಣೆ ಮಾಡಲಿದ್ದಾರೆ. ನಂತರ, ಹಂತಹಂತವಾಗಿ ವಿವಿಧ ಜಿಲ್ಲೆಗಳ ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗ ಹೊಸ ಕ್ಯಾಪ್ ವಿತರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಜೂನ್‌ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೊಸ ಕ್ಯಾಪ್ ವಿತರಣೆಗೆ ನಿರ್ಧರಿಸಲಾಗಿತ್ತು. ಅದಾದ ಮೇಲೆ ತೆಲಂಗಾಣ ಪೊಲೀಸರು ಧರಿಸುತ್ತಿರುವ ತೆಳುವಾದ ‘ಪೀಕ್ ಕ್ಯಾಪ್’ ವಿತರಣೆ ಮಾಡಲು ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು. ಆಗಸ್ಟ್ 7ರಂದು ನಡೆದಿದ್ದ ಕಿಟ್ ನಿರ್ದಿಷ್ಟತಾ ಸಮಿತಿ ಸಭೆಯಲ್ಲಿ ಟೆಂಡರ್ ಅಂತಿಮಗೊಳಿಸಲಾಗಿತ್ತು. ಇದೀಗ ಹೊಸ ಟೋಪಿಗಳು ಸಿದ್ಧಗೊಂಡಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ‘ಪೀಕ್ ಕ್ಯಾಪ್’ ವಿತರಣೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಆರಂಭದಲ್ಲಿ ಟರ್ಬನ್ ಮಾದರಿಯ ಟೋಪಿಯನ್ನು ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದರು. ಪ್ರಸ್ತುತ ಬಳಸುತ್ತಿರುವ ಟೋಪಿಯನ್ನು (ಸ್ಲೋಚ್ ಕ್ಯಾಪ್) ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರಂಭಿಸಲಾಗಿತ್ತು. ಹಳೆ ಮಾದರಿಯ ಟೋಪಿ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಪೊಲೀಸರು ಅಳಲು ತೋಡಿಕೊಂಡಿದ್ದರು.
‘ಪ್ರತಿಭಟನೆ, ರ್‍ಯಾಲಿ ವೇಳೆ ಈ ಟೋಪಿ ಧರಿಸಿ, ಕರ್ತವ್ಯ ನಿರ್ವಹಿಸುವುದು ಕಾನ್‌ಸ್ಟೆಬಲ್‌ಗಳಿಗೆ ಕಷ್ಟವಾಗುತ್ತಿದೆ. ಟೋಪಿ ಕೆಳಕ್ಕೆ ಬಿದ್ದರೆ ಇಲಾಖೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ, ಹಳೆ ಮಾದರಿಯ ಟೋಪಿ ಬದಲು ತಲೆಯ ಮೇಲೆ ಗಟ್ಟಿಯಾಗಿ ನಿಲ್ಲುವಂತಹ ಟೋಪಿಗಳನ್ನು ನೀಡಿದರೆ ಉತ್ತಮ’ ಎಂದು ಕಾನ್‌ಸ್ಟೆಬಲ್‌ಗಳು ಇಲಾಖೆಗೆ ಮನವಿ ಸಲ್ಲಿಸಿದ್ದರು.
ಹೊಸ ಟೋಪಿ ತೆಳು ಹಾಗೂ ಹಗುರವಾಗಿದೆ. ತೆಲಂಗಾಣ ಪೊಲೀಸರು ಇದೇ ಮಾದರಿಯ ಟೋಪಿಯನ್ನು ಬಳಸುತ್ತಿದ್ದಾರೆ. ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದಲೂ ಅನುಕೂಲವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ರಾಜ್ಯದ ಪೊಲೀಸ್ ಅಧಿಕಾರಿಗಳು ಧರಿಸುತ್ತಿರುವ ಟೋಪಿಯಿಂದ ಯಾವುದೇ ಆರೋಗ್ಯ ಸಮಸ್ಯೆ ಆಗುತ್ತಿಲ್ಲ. ಅದೇ ಮಾದರಿಯ ಟೋಪಿಯನ್ನು ವಿತರಣೆ ಮಾಡಿದರೆ ಅಧಿಕಾರಿ ಮತ್ತು ಸಿಬ್ಬಂದಿ ಗುರುತಿಸುವುದು ಕಷ್ಟವಾಗಲಿದೆ. ಇದು ಪೊಲೀಸರ ಕಾರ್ಯನಿರ್ವಹಣೆ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗೆ ಸ್ಮಾರ್ಟ್ ಪೀಕ್ ಟೋಪಿಯನ್ನು ಅಂತಿಮಗೊಳಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.