ADVERTISEMENT

ಬಿಜೆಪಿ ದಲಿತ ನಾಯಕರಿಂದ ಆತ್ಮವಂಚನೆ: ಧ್ರುವನಾರಾಯಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 4:06 IST
Last Updated 14 ಜುಲೈ 2022, 4:06 IST
ಆರ್‌. ಧ್ರುವ ನಾರಾಯಣ
ಆರ್‌. ಧ್ರುವ ನಾರಾಯಣ   

ಬೆಂಗಳೂರು: ‘ರಾಜ್ಯ ಬಿಜೆಪಿ ಸರ್ಕಾರದಿಂದ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದ್ದು, ದಲಿತರು ಅನಾಥ ಶಿಶುಗಳಂತಾಗಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತದ ಆ ಪಕ್ಷದ ದಲಿತ ನಾಯಕರಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬಿಜೆಪಿಯಲ್ಲಿರುವ ದಲಿತ ನಾಯಕರು, ಶಾಸಕರು ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.

‘ಬಿಜೆಪಿಯ ದಲಿತ ನಾಯಕರು ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಛಲವಾದಿ ನಾರಾಯಣ ಸ್ವಾಮಿ ಚಡ್ಡಿಯನ್ನು ಕೈಯಲ್ಲಿ ಹಿಡಿದದ್ದೇ ಉದಾಹರಣೆ. ಅನ್ಯಾಯದ ವಿರುದ್ಧ ಸೊಲ್ಲೆತ್ತದ ಆ ಪಕ್ಷ ಪ್ರತಿನಿಧಿಸುವ ದಲಿತ ಸಚಿವರು ಹಾಗೂ ಶಾಸಕರಿಗೆ ತಾಕತ್ತಿದ್ದರೆ ಪರಿಶಿಷ್ಟರ ಕಲ್ಯಾಣಕ್ಕೆ ಅನುದಾನ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನದಲ್ಲಿಯೂ ಸರ್ಕಾರ ಶೇ 40 ಕಮಿಷನ್ ಪಡೆಯುತ್ತಿದೆ. ಗಂಗಾ ಕಲ್ಯಾಣ ಯೋಜನೆ ಹಗರಣ ಇದಕ್ಕೊಂದು ನಿದರ್ಶನ. ಹಲವು ಯೋಜನೆಗಳನ್ನು ಕೈಬಿಟ್ಟಿರುವ ಸರ್ಕಾರ, ಸಹಾಯಧನಗಳನ್ನು ನಿಲ್ಲಿಸಿವೆ. ಬಡವರಿಗೆ ಕೊಟ್ಟ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ’ ಎಂದ ಅವರು, ‘ಬಜೆಟ್ ಗಾತ್ರದಲ್ಲಿ ಜನಸಂಖ್ಯೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡದಿದ್ದರೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.