ADVERTISEMENT

ತಾಕತ್‌ ಇದ್ದರೆ 15 ಪ್ರಶ್ನೆಗಳಿಗೆ ಮೋದಿ ಉತ್ತರಿಸಲಿ: ರಾಮಲಿಂಗಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 21:01 IST
Last Updated 9 ನವೆಂಬರ್ 2022, 21:01 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ‘ನಾಲ್ಕು ವರ್ಷಗಳಿಂದ ಮಳೆಯಿಂದ ನಲುಗಿರುವ ರಾಜ್ಯಕ್ಕೆ ಕೇಂದ್ರದಿಂದ ಬಂದ ಪರಿಹಾರವೆಷ್ಟು? ಸ್ಮಾರ್ಟ್ ಸಿಟಿ, ಜಲಜೀವನ ಮಿಷನ್, ಎರಡು ಕೋಟಿ ಉದ್ಯೋಗ, ರೈತರ ಆದಾಯ ಇಮ್ಮಡಿ, ಎಲ್ಲರಿಗೂ ಸ್ವಂತ ಸೂರು ಸೇರಿದಂತೆ ಯಾವುದು ಪೂರ್ಣಗೊಂಡಿದೆ? ಉಪನಗರ ರೈಲು ಯೋಜನೆಗೆ ಎಷ್ಟು ಹಣ ನೀಡಿದ್ದೀರಿ?’ ಸೇರಿದಂತೆ 15 ಪ್ರಶ್ನೆಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಡಬಲ್ ಎಂಜಿನ್ ಸರ್ಕಾರ ಕರ್ನಾಟಕದಲ್ಲಿ ಏನು ಸಾಧನೆ ಮಾಡಿ ಗುಡ್ಡೆ ಹಾಕಿದೆ ಎಂದು ಉತ್ತರಿಸುವ ದಮ್‌, ತಾಕತ್ತು 56 ಇಂಚಿನ ಎದೆಯ, ಮಾತಿನ ಮಲ್ಲ ಪ್ರಧಾನಿ ಮೋದಿ ಅವರಿಗಿದೆ ಎಂದು ಭಾವಿಸಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ’ ಎಂದರು.

‘ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಇದೇ 11ರಂದು ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದಲ್ಲಿ ಕರ್ನಾಟಕ ಎಂಬ ರಾಜ್ಯವಿದೆ ಎಂದು ಅವರಿಗೆ ಜ್ಞಾನೋದಯವಾಗಿದೆ. ಹೀಗಾಗಿ, 3–4 ತಿಂಗಳಿಂದ ರಾಜ್ಯದಲ್ಲಿ ಪ್ರದಕ್ಷಿಣೆ ಆರಂಭಿಸಿದ್ದಾರೆ’ ಎಂದರು.

ADVERTISEMENT

‘ರಾಜ್ಯ ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ಚುನಾವಣೆಗೂ ಮೊದಲು ಕೊಟ್ಟ ಭರವಸೆಗಳಲ್ಲಿ ಯಾವುದನ್ನು ಈಡೇರಿಸಿದ್ದೀರಿ ಎಂದು ನಾವು ನಿತ್ಯ ಪ್ರಶ್ನೆ ಕೇಳುತ್ತಲೇ ಇದ್ದೇವೆ. ಆದರೆ, ಉತ್ತರ ನೀಡುವ ತಾಕತ್ತು ಬಿಜೆಪಿಯವರಿಗಿಲ್ಲ’ ಎಂದರು.

‘ಜಿಎಸ್‌ಟಿ ಹಣದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗುವ ಅನುದಾನ ಪಟ್ಟಿಯಲ್ಲಿ ರಾಜ್ಯಕ್ಕೆ ಎಷ್ಟನೇ ಸ್ಥಾನವಿದೆ? ₹ 23 ಕೋಟಿ ವೆಚ್ಚದಲ್ಲಿ ಹಾಕಿದ್ದ ಡಾಂಬರು ಕಿತ್ತು ಹೋಗಿರುವುದಕ್ಕೆ ನಿಮ್ಮ ಅಭಿಪ್ರಾಯವೇನು? ಶೇ 40 ಕಮಿಷನ್ ಕುರಿತ ದೂರು, ರುಪ್ಸಾ ಸಂಸ್ಥೆಯ ದೂರು, ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ, ಹುಬ್ಬಳ್ಳಿ ಗುತ್ತಿಗೆದಾರ ಬಸವರಾಜ್ ದಯಾಮರಣ ಅರ್ಜಿ ಬಗ್ಗೆ ಮೌನ ಯಾಕೆ’ ಎಂದೂ ಪ್ರಧಾನಿಯನ್ನು ರೆಡ್ಡಿ ಕೇಳಿದ್ದಾರೆ.

‘ಬೆಂಗಳೂರು ನಗರ ಗಾರ್ಬೇಜ್ ಸಿಟಿ ಆಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ರಸ್ತೆ ಗುಂಡಿಗಳ ಬಗ್ಗೆ ಏನು ಹೇಳುತ್ತೀರಿ? ಮೇಕೆದಾಟು, ಮಹದಾಯಿ ಯೋಜನೆ ಜಾರಿ ಯಾವಾಗ? ಕೋವಿಡ್‌ನಿಂದ ಸತ್ತವರಲ್ಲಿ ಎಷ್ಟು ಕುಟುಂಬಕ್ಕೆ ಪರಿಹಾರ ನೀಡಿದ್ದೀರಿ? ಜಾತಿ, ಧರ್ಮಗಳ ಹೆಸರಲ್ಲಿ ದ್ವೇಷ ಬಿತ್ತಿ, ಸಮಾಜ ಒಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ‌’ ಎಂದೂ ಪ್ರಧಾನಿಯನ್ನು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.