
ಬೆಂಗಳೂರು: ಜನಸಾಮಾನ್ಯರು ಎದುರಿಸುತ್ತಿರುವ 15 ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ‘ಸಂಯುಕ್ತ ಹೋರಾಟ– ಕರ್ನಾಟಕ’ ಸಮಿತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಕೇಂದ್ರ–ರಾಜ್ಯ ಸರ್ಕಾರಗಳ ರೈತ–ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟನಕಾರರು ಖಂಡಿಸಿದರು. ‘ಬೆಂಗಳೂರು ಚಲೋ’ಗೆ ರಾಜ್ಯದ ವಿವಿಧ ಭಾಗದಿಂದ ಹೋರಾಟಗಾರರು ಹಾಗೂ ರೈತರು ಬಂದಿದ್ದರು. ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಕರ್ನಾಟಕ ಜನಶಕ್ತಿ ಅಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ‘ರಾಜ್ಯದಲ್ಲಿ ಸಮಸ್ಯೆಗಳ ಹಾಗೂ ಮನೆಹಾಳು ಯೋಜನೆಗಳ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ, ಪರಿಹಾರ ಮಾತ್ರ ಸಿಗುತ್ತಿಲ್ಲ’ ಎಂದು ಹೇಳಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಿಜೆಪಿ ಜಾರಿ ಮಾಡಿರುವ ಎಲ್ಲ ಜನವಿರೋಧಿ ಕಾನೂನುಗಳನ್ನು ರದ್ದು ಮಾಡುತ್ತೇವೆಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆದರೆ, ಕೊಟ್ಟ ಮಾತು ಉಳಿಸಿಕೊಂಡಿಲ್ಲ, ಇದು ಗ್ಯಾರಂಟಿ ಸರ್ಕಾರ ಅಲ್ಲ’ ಎಂದು ಆಕ್ರೋಶ ಹೊರಹಾಕಿದರು.
ರೈತ ಸಂಘದ ಮುಖಂಡ ಎಚ್.ಆರ್. ಬಸವರಾಜಪ್ಪ ಮಾತನಾಡಿ, ‘ರಾಮನಗರ ಜಿಲ್ಲಾಧಿಕಾರಿ ಮತ್ತು ಕೋಲಾರ ಅರಣ್ಯಾಧಿಕಾರಿಗಳು ರೈತರೊಂದಿಗೆ ಸಂಯಮದಿಂದ ವರ್ತಿಸಬೇಕು. ಅವರ ವರ್ತನೆ ಅದೇ ರೀತಿಯಲ್ಲಿ ಮುಂದುವರಿದರೆ ಆಯಾ ಜಿಲ್ಲೆಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಾಧ್ಯಾಪಕ ಬಾಬು ಮ್ಯಾಥ್ಯು ಮಾತನಾಡಿ, ‘ಸಂವಿಧಾನವನ್ನು ನಾಶ ಪಡಿಸುವ ಹಲವು ಹುನ್ನಾರಗಳನ್ನು ನಡೆಸಲಾಗುತ್ತಿದೆ. ಸಂವಿಧಾನ ನಂಬಿಕೊಂಡಿರುವ ರೈತರು–ಕಾರ್ಮಿಕರ ಐಕ್ಯತೆ ಮುರಿಯುವ ಯತ್ನ ನಡೆಯುತ್ತಿದೆ. ಸಾಮಾನ್ಯ ಜನರ ಮೇಲೆ ದೌರ್ಜನ್ಯದ ಜೊತೆಗೆ, ಬಂಡವಾಳಶಾಹಿ ವ್ಯಯವಸ್ಥೆಯಲ್ಲಿ ದೊಡ್ಡ ಬದಲಾವಣೆ ನಡೆಯುತ್ತಿದೆ’ ಎಂದು ಹೇಳಿದರು.
‘ಕಾರ್ಮಿಕರ ಎನ್ನುವ ಕಾಯ್ದೆಗಳು ಸಾಕಷ್ಟು ಅಮಾನವೀಯವಾಗಿವೆ. ಇನ್ನು ಮುಂದೆ ಕಾರ್ಮಿಕರು ಕಾನೂನಾತ್ಮಕ ಹೋರಾಟ ಮಾಡಲು ಸಾಧ್ಯವಿಲ್ಲ. ಹೋರಾಟ ಮಾಡಿದರೆ, ಅದು ಕಾನೂನುಬಾಹಿರ ಆಗುತ್ತದೆ. ಕಾರ್ಮಿಕ ಸಂಘಟನೆಗಳು ನಿಷೇಧ ಆಗುತ್ತವೆ’ ಎಂದು ಎಚ್ಚರಿಸಿದರು.
ಹೋರಾಟದಲ್ಲಿ ಬಡಗಲಪುರ ನಾಗೇಂದ್ರ, ಯು.ಬಸವರಾಜು, ಮೀನಾಕ್ಷಿ ಸುಂದರಂ, ಕುಮಾರ್ ಸಮತಳ, ಕೆ.ವಿ.ಭಟ್, ವರಲಕ್ಷ್ಮಿ, ಮೈತ್ರೇಯಿ, ಟಿ.ಯಶವಂತ, ಸುಷ್ಮಾ ಪಾಲ್ಗೊಂಡಿದ್ದರು.
ಪ್ರತಿಭಟನೆಯ ಬಳಿಕ ರೈತರು ಹಾಗೂ ಹೋರಾಟಗಾರರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಹಕ್ಕೊತ್ತಾಯಗಳು
* ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ಶ್ರಮ ಶಕ್ತಿ ನೀತಿ–2025 ರದ್ದುಪಡಿಸಬೇಕು
* ಬಗರ್‌ಹುಕುಂ ಜಮೀನು ಸಾಗುವಳಿ ರೈತರಿಗೆ ಭೂಮಿ ಮಂಜೂರು ಮಾಡಬೇಕು
* ದೇವನಹಳ್ಳಿ ಭೂಸ್ವಾಧೀನ ರದ್ದು ಘೋಷಣೆಯನ್ನು ತಕ್ಷಣವೇ ಗೆಜೆಟ್‌ನಲ್ಲಿ ಪ್ರಕಟಿಸಬೇಕು
* ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಆತಂಕದಿಂದ ಪಾರು ಮಾಡಬೇಕು
* ಎಲ್ಲ ಆದಿವಾಸಿ ಅರಣ್ಯವಾಸಿಗಳಿಗೆ ಭೂಮಿಹಕ್ಕು ನೀಡಬೇಕು
* ಸರ್ಜಾಪುರ ಹೋಬಳಿಯ ಆಂದೇನಳ್ಳಿ ಮುತ್ತೆನಲ್ಲೂರು ಸೊಳ್ಳೆಪುರ ಗ್ರಾಮಗಳಲ್ಲಿ ಫಲವತ್ತಾದ ಜಮೀನು ಸ್ವಾಧೀನ ಕೈಬಿಡಬೇಕು
* ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.