ADVERTISEMENT

ಕರ್ನಾಟಕ ರಾಜ್ಯೋತ್ಸವ: ಪುಸ್ತಕಗಳ ಸಗಟು ಖರೀದಿಗೆ ಎಚ್‌ಡಿಕೆ ಆಗ್ರಹ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್‌ ಹೌಸ್‌ನಲ್ಲಿ ಪುಸ್ತಕ ಜಾತ್ರೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 14:44 IST
Last Updated 1 ನವೆಂಬರ್ 2025, 14:44 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಸಗಟು ಖರೀದಿಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು. 

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್‌ ಹೌಸ್‌ ಶನಿವಾರ ಆಯೋಜಿಸಿದ್ದ ಪುಸ್ತಕ ಜಾತ್ರೆಯಲ್ಲಿ ಅವರು ಮಾತನಾಡಿದರು. 

‘ನಾಲ್ಕೈದು ವರ್ಷಗಳಿಂದ ಕನ್ನಡ ಪುಸ್ತಕಗಳ ಸಗಟು ಖರೀದಿ ಆಗಿಲ್ಲ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕನ್ನಡ ಸಾಹಿತ್ಯ ಸಮಗ್ರವಾಗಿ ಲಭ್ಯ ಇರಬೇಕು. ಸರ್ಕಾರ ಸಗಟು ಪುಸ್ತಕ ಖರೀದಿಯನ್ನು ಕಾಟಾಚಾರಕ್ಕೆ ಮಾಡಬಾರದು. ನಮ್ಮ ಕನ್ನಡ, ನಮ್ಮ ಸಾಹಿತ್ಯ, ನಮ್ಮ ಸಾಹಿತಿಗಳು ಎನ್ನುವ ಅಕ್ಕರೆಯಿಂದ ಪುಸ್ತಕ ಖರೀದಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪುಸ್ತಕ ಸಂಸ್ಕೃತಿ ಬೆಳೆದಷ್ಟು ಭಾಷೆ ಸದೃಢವಾಗಿ ಬೆಳೆಯುತ್ತದೆ. ಅನೇಕ ಮಹಾನ್ ಸಾಹಿತಿಗಳು, ಕವಿಗಳು, ಇನ್ನಿತರ ಬರಹಗಾರರು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ತರಾಸು ಅವರ ದುರ್ಗಾಸ್ತಮಾನ ಕಾದಂಬರಿಯನ್ನು ಅನೇಕ ಸಲ ಓದಿದ್ದೇನೆ. ಈಗ ಮತ್ತೊಮ್ಮೆ ಓದುತ್ತಿದ್ದೇನೆ’ ಎಂದರು.  

‘ಇವತ್ತಿನ ಕಾಲಘಟ್ಟದಲ್ಲಿ ಪ್ರಕಾಶನ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು, ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಆದರೂ ಕರ್ನಾಟಕದಲ್ಲಿ ಅಸಂಖ್ಯಾತ ಪ್ರಕಾಶನ ಸಂಸ್ಥೆಗಳು ಕನ್ನಡದ ಮೇಲಿನ ಮಮತೆಯಿಂದ ಪ್ರಕಾಶನ ಕಾರ್ಯ ಮಾಡುತ್ತಿವೆ. ಸಪ್ನ ಪುಸ್ತಕ ಮಳಿಗೆ ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ನಟ ಅನಿರುದ್ಧ ಜತಕರ, ನಟಿ ಅಂಕಿತ ಅಮರ್, ಸಪ್ನ ಪುಸ್ತಕ ಮಳಿಗೆಯ ನಿತಿನ್ ಶಾ, ದೊಡ್ಡೇಗೌಡ, ಸಾಹಿತಿಗಳಾದ ಎಚ್. ಡುಂಡಿರಾಜ್, ಎಂ.ಎಸ್. ನರಸಿಂಹಮೂರ್ತಿ, ವೈ.ವಿ. ಗುಂಡೂರಾವ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.