ADVERTISEMENT

ತ್ರೈಮಾಸಿಕ ವರದಿ: ಬಿಲ್ಡರ್‌ಗಳಿಗೆ ಕೆ–ರೇರಾ ಗಡುವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 16:24 IST
Last Updated 16 ಫೆಬ್ರುವರಿ 2026, 16:24 IST
ರಿಯಲ್ ಎಸ್ಟೇಟ್
ರಿಯಲ್ ಎಸ್ಟೇಟ್    

ಬೆಂಗಳೂರು: ವಸತಿ ಯೋಜನೆಗಳ ತ್ರೈಮಾಸಿಕ ಪ್ರಗತಿ ವರದಿಯನ್ನು ಮಾರ್ಚ್ 31ರೊಳಗೆ ಸಲ್ಲಿಸುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ) ಬಿಲ್ಡರ್‌ಗಳಿಗೆ ಗಡುವು ನೀಡಿದೆ.

‘ಮಾರ್ಚ್ 31ರ ಒಳಗೆ ವರದಿ ಸಲ್ಲಿಸದಿದ್ದರೆ, ಏಪ್ರಿಲ್ 1 ರಿಂದಲೇ ದಂಡದ ಮೊತ್ತವನ್ನು ವಸೂಲು ಮಾಡಲು ಕ್ರಮ ಜರುಗಿಸಲಾಗುವುದು’ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದೆ.

2025–26ನೇ ಸಾಲಿನ ಮೊದಲ ಮೂರು ತ್ರೈಮಾಸಿಕ ವರದಿಗಳನ್ನು ಸಲ್ಲಿಸದ ಬಿಲ್ಡರ್‌ಗಳಿಗೆ ಪ್ರತಿ ತ್ರೈಮಾಸಿಕ ವರದಿಗೆ ತಲಾ ₹25 ಸಾವಿರದಂತೆ ದಂಡ ವಿಧಿಸಲು ಪ್ರಾಧಿಕಾರ ತೀರ್ಮಾನಿಸಿದೆ. ಈ ಆದೇಶ ಫೆಬ್ರುವರಿ 7 ರಿಂದ ಜಾರಿಗೆ ಬಂದಿದೆ ಎಂದು  ನೋಟಿಸ್‌ನಲ್ಲಿ ತಿಳಿಸಲಾಗಿದೆ.

ADVERTISEMENT

ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ ಅನ್ವಯ ವಸತಿ ಯೋಜನೆಯನ್ನು ನೋಂದಾಯಿಸುವ ಪ್ರತಿಯೊಬ್ಬ ಬಿಲ್ಡರ್‌ ಅಥವಾ ಪ್ರಮೋಟರ್‌ ಪ್ರಾಧಿಕಾರದ ವೆಬ್ ಪೋರ್ಟ್‌ಲ್‌ಗಳಲ್ಲಿ ತ್ರೈಮಾಸಿಕ ವರದಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ವರದಿಗಳಿಂದ ಗೃಹ ಖರೀದಿದಾರರು ತಮ್ಮ ಯೋಜನೆಗಳ ಕಾಮಗಾರಿ ಎಷ್ಟು ಪೂರ್ಣಗೊಂಡಿದೆ ಎಂಬ ಮಾಹಿತಿ ಪಡೆಯಲು ಸಾಧ್ಯವಾಗಲಿದೆ.

ಪ್ರತಿ ತ್ರೈಮಾಸಿಕ ಅಂದರೆ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯನ್ನು ಜುಲೈ ಮೊದಲ ವಾರದಲ್ಲಿ, 2ನೇ ತ್ರೈಮಾಸಿಕ ವರದಿಯನ್ನು ಅ.15ರೊಳಗೆ ಮತ್ತು ಮೂರನೇ ಹಾಗೂ ನಾಲ್ಕನೇ ವರದಿಗಳನ್ನು ಕ್ರಮವಾಗಿ ಜನವರಿ 15 ಮತ್ತು ಏಪ್ರಿಲ್ 15ರೊಳಗೆ ಸಲ್ಲಿಸಬೇಕು. ಪ್ರಾಧಿಕಾರದ ಆದೇಶವಿದ್ದರೂ ಬಿಲ್ಡರ್‌ಗಳು ವರದಿ ಸಲ್ಲಿಸದ ಕಾರಣ ದಂಡ ವಿಧಿಸಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.