ADVERTISEMENT

ಒಳಮೀಸಲು | ಪ್ರತಿಭಟನಾ ಕಿಚ್ಚು: ವಿಧಾನಸೌಧದತ್ತ ನುಗ್ಗಲು ಯತ್ನ, ಪೊಲೀಸರ ತಡೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 15:53 IST
Last Updated 10 ಸೆಪ್ಟೆಂಬರ್ 2025, 15:53 IST
ಒಳಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ಬಂಜಾರ, ಭೋವಿ, ಕೊರಚ, ಕೊರವ ಮೀಸಲಾತಿ ಒಕ್ಕೂಟದಿಂದ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಯಾರಿಕೇಡ್‌ ಹತ್ತಿದ್ದ ಪ್ರತಿಭಟನಕಾರರು
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಒಳಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ಬಂಜಾರ, ಭೋವಿ, ಕೊರಚ, ಕೊರವ ಮೀಸಲಾತಿ ಒಕ್ಕೂಟದಿಂದ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಯಾರಿಕೇಡ್‌ ಹತ್ತಿದ್ದ ಪ್ರತಿಭಟನಕಾರರು ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದ್ದು, ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಕನಿಷ್ಠ ಶೇ 5ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ನಡೆದ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದು, ಪ್ರತಿಭಟನಕಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಘಟನೆ ನಡೆಯಿತು.

‘ಬೆಂಗಳೂರು ಚಲೊ’ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಒಳಮೀಸಲಾತಿ ಕಲ್ಪಿಸುವ ವೇಳೆ ತಾರತಮ್ಯ ಮಾಡಲಾಗಿದೆ ಎಂದು ಆಪಾದಿಸಿ, ಪ್ರತಿಕೃತಿ ದಹಿಸಿದರು. ಮಧ್ಯಾಹ್ನದವರೆಗೂ ಶಾಂತ ರೀತಿಯಲ್ಲಿ ಸಾಗುತ್ತಿದ್ದ ಪ್ರತಿಭಟನೆಯು ಆ ಬಳಿಕ ಉಗ್ರ ಸ್ವರೂಪ ಪಡೆಯಿತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ ತೆರಳಿದ ಬಳಿಕ ಪ್ರತಿಭಟನಕಾರರು ರಸ್ತೆಗಿಳಿದು ವಾಹನಗಳನ್ನು ತಡೆದರು. ತಮ್ಮ ಮನವಿ ಸ್ವೀಕರಿಸಲು ಮುಖ್ಯಮಂತ್ರಿ ಅಥವಾ ಸಚಿವರು ಬರಬೇಕು ಎಂದು ಆಗ್ರಹಿಸಿದರು. ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಮನವಿ ಸ್ವೀಕರಿಸಲು ಬಂದರೂ ಪ್ರತಿಭಟನಕಾರರ ಕೋಪ ತಣಿಯಲಿಲ್ಲ. ಮಂತ್ರಿಗಳೇ ಬರಬೇಕು ಎಂದು ಪಟ್ಟು ಹಿಡಿದರು. 

ADVERTISEMENT

‘ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಕನಿಷ್ಠ ಶೇ 5ರಷ್ಟು ಮೀಸಲಾತಿ ಕಲ್ಪಿಸಬೇಕು. ನಾಗಮೋಹನದಾಸ್‌ ವರದಿಯಿಂದ ‘ಸ್ಪೃಶ್ಯ’ ಹಾಗೂ ‘ಅಸ್ಪೃಶ್ಯ’ ಪದಗಳ ಬಳಕೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಜಾತಿನಿಂದನೆ ಮೊಕದ್ದಮೆ ಹೂಡಬೇಕಾಗುತ್ತದೆ. ಅಲೆಮಾರಿಗಳಿಗೆ ಶೇ 1 ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು. ನಾಗಮೋಹನದಾಸ್‌ ವರದಿಯ ಶಿಫಾರಸುಗಳನ್ನು ಕೈಬಿಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕೆರಳಿದ್ದ ಪ್ರತಿಭಟನಕಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಆಗ ಅವರನ್ನು ಪೊಲೀಸರು ತಡೆದರು. ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೆಲವರು ಬ್ಯಾರಿಕೇಡ್ ಹಾರಿ ಕೆ.ಆರ್. ವೃತ್ತದ ಮೂಲಕ ವಿಧಾನಸೌಧದ ಕಡೆಗೆ ಓಡಿದಾಗ, ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪ್ರತಿಭಟನಕಾರರು ಭಾರಿ ಸಂಖ್ಯೆಯಲ್ಲಿ ಇದ್ದ ಕಾರಣ ಮೈಸೂರು ಬ್ಯಾಂಕ್‌ ವೃತ್ತ, ಕೆ.ಆರ್‌. ವೃತ್ತ, ಅರಮನೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಚಾಲಕರು ಪರದಾಡಿದರು. ಪರ್ಯಾಯ ರಸ್ತೆಯಲ್ಲೂ ದಟ್ಟಣೆ ಇತ್ತು.

ಹಲವರು ಅಸ್ವಸ್ಥ:

ಪ್ರತಿಭಟನಾ ಸ್ಥಳದಲ್ಲಿ ಹಲವರು ಅಸ್ವಸ್ಥಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.‌ ಮಹಿಳೆಯೊಬ್ಬರು ಮೈಮೇಲೆ ಡೀಸೆಲ್‌ ಸುರಿದುಕೊಂಡರು.

ಹೋರಾಟಗಾರರ ಆಕ್ರೋಶ ಹೆಚ್ಚಾಗಿ ನೂಕಾಟ– ತಳ್ಳಾಟ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕರೆಸಿಕೊಳ್ಳಲಾಯಿತು. ಕೆಎಸ್‌ಆರ್‌ಪಿ ತುಕಡಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಆಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ‘ಒಂದು ವಾರದಲ್ಲಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ರಾಜ್ಯ ವ್ಯಾಪಿ ಹೋರಾಟ ಮಾಡುವುದಾಗಿ’ ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಒಳಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ಬಂಜಾರ ಭೋವಿ ಕೊರಚ ಕೊರವ ಮೀಸಲಾತಿ ಒಕ್ಕೂಟದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು  – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಹೋರಾಟದ ನೇತೃತ್ವ ವಹಿಸಿದ್ದ ಪಿ.ರಾಜೀವ್ ಮಾತನಾಡಿ, ‘ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಸರ್ಕಾರದ ವಿರುದ್ಧ ಅಲ್ಲ. ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಉಮೇಶ್ ಜಾಧವ್, ಶಾಸಕರಾದ ಪ್ರಭು ಚೌಹಾಣ್, ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕ ದೇವನಹಳ್ಳಿ ಚಂದ್ರಪ್ಪ ಪಾಲ್ಗೊಂಡಿದ್ದರು.

ಒಳಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ಬಂಜಾರ ಭೋವಿ ಕೊರಚ ಕೊರವ ಮೀಸಲಾತಿ ಒಕ್ಕೂಟದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ರಸ್ತೆತಡೆ ನಡೆಸಿದ ಪ್ರತಿಭಟನಕಾರರು   ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಸಾಮಾಜಿಕ ನ್ಯಾಯ ಸಂವಿಧಾನ ಎಂದು ಭಾಷಣ ಮಾಡುವವರೇ ನಮ್ಮ ಸಮಾಜಗಳ ಬೆನ್ನಿಗೆ ಚೂರಿ ಹಾಕಿದ್ದಾರೆ
ಪಿ.ರಾಜೀವ್ ಮಾಜಿ ಶಾಸಕ
ಸರ್ಕಾರಕ್ಕೆ ವಾರದ ಗಡುವು
ರಾಜ್ಯ ಸರ್ಕಾರಕ್ಕೆ ಹೋರಾಟಗಾರರು ವಾರದ ಗಡುವು ನೀಡಿದ್ದಾರೆ. ಅಷ್ಟರಲ್ಲಿ ಒಳಮೀಸಲಾತಿ ಜಾರಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು. ಸರಿಪಡಿಸದೇ ಇದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು. 
‘ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಕ್ಕಿಲ್ಲ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮನೆ ಮುರಿಯುವ ಕೆಲಸ ಮಾಡುವುದು ಸುಲಭ. ಮನೆ ಕಟ್ಟುವುದು ಅತ್ಯಂತ ಕಷ್ಟದ ಕೆಲಸ. ಜನ ನಿಮಗೆ ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದಿದ್ದಾರೆ. ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯಗಳು ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡುವ ಅಪೇಕ್ಷೆ ಜನರಲ್ಲಿ ಇತ್ತು. ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರವು ಶೋಷಿತರಿಗೆ ನ್ಯಾಯ ನೀಡುವ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. ‘ಎಷ್ಟು ದಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದೀರಿ ಎಂಬುದು ಮುಖ್ಯವಲ್ಲ ಸಿದ್ದರಾಮಯ್ಯನವರೇ. ಆ ಕುರ್ಚಿಯಲ್ಲಿ ಕೂತಾಗ ಎಲ್ಲ ಸಮುದಾಯಗಳಿಗೆ ನ್ಯಾಯ ಕೊಟ್ಟಿದ್ದೀರಾ ಎಂಬುದು ಮುಖ್ಯ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.