ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಮಳಲಿ ವಸಂತಕುಮಾರ್ ಸಾಹಿತ್ಯ ದತ್ತಿನಿಧಿ’ ಪುರಸ್ಕಾರಕ್ಕೆ ಮಂಡ್ಯದ ಬರಹಗಾರ ರಾಮೇಗೌಡ ಆಯ್ಕೆಯಾಗಿದ್ದಾರೆ.
ಈ ಪುರಸ್ಕಾರವು ₹ 10 ಸಾವಿರ ನಗದು ಒಳಗೊಂಡಿದೆ. ‘ಮನುಕುಲದ ಮಾತುಗಾರ’ ಎಂದೇ ಹೆಸರಾಗಿದ್ದ ಮಳಲಿ ವಸಂತ ಕುಮಾರ್ ಅವರು ಶ್ರೇಷ್ಠ ವಾಗ್ಮಿಗಳು ಮತ್ತು ಬರಹಗಾರರೂ ಆಗಿದ್ದರು. ಅವರ ಹೆಸರಿನಲ್ಲಿ ಕುಟುಂಬದವರು ದತ್ತಿ ಸ್ಥಾಪಿಸಿದ್ದಾರೆ. ಬರಹಗಾರರಿಗೆ, ಕನ್ನಡಪರ ಹೋರಾಟಗಾರರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
‘ರಾಗೌ’ ಕಾವ್ಯನಾಮದಿಂದ ಬರೆಯುತ್ತಿರುವ ರಾಮೇಗೌಡ, 37 ವರ್ಷಗಳ ಕಾಲ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕವಿತೆ, ಮಕ್ಕಳ ಸಾಹಿತ್ಯ, ನಾಟಕ, ವಿಮರ್ಶೆ, ಜಾನಪದ, ಗ್ರಂಥ ಸಂಪಾದನೆ ಮೊದಲಾದ ಕ್ಷೇತ್ರಗಳಲ್ಲಿ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.