ADVERTISEMENT

ಉಗ್ರಾಣ ನಿಗಮದ ನೂತನ ಆಡಳಿತ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 2:52 IST
Last Updated 19 ಫೆಬ್ರುವರಿ 2021, 2:52 IST
ಉಗ್ರಾಣ ಭವನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಉದ್ಘಾಟಿಸಿದರು. ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪಾಲ್ಗೊಂಡಿದ್ದರು.
ಉಗ್ರಾಣ ಭವನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಉದ್ಘಾಟಿಸಿದರು. ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪಾಲ್ಗೊಂಡಿದ್ದರು.   

ಬೆಂಗಳೂರು: ನಗರದ ಪ್ರೈಂ ರೋಸ್‌ ರಸ್ತೆಯಲ್ಲಿ ನಿರ್ಮಿಸಿರುವ ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿಯ ಕಟ್ಟಡ ‘ಉಗ್ರಾಣ ಭವನ’ವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಉದ್ಘಾಟಿಸಿದರು.

ಉಗ್ರಾಣ ನಿಗಮವರು ಪ್ರೈಂ ರೋಸ್ ರಸ್ತೆಯಲ್ಲಿ ನಾಲ್ಕು ಎಕರೆ ಜಮೀನು ಹೊಂದಿದೆ. ಅಲ್ಲಿ ಇದ್ದ 50 ವರ್ಷಗಳ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ₹ 3.76 ಕೋಟಿ ವೆಚ್ಚದಲ್ಲಿ ನೂತನ ಉಗ್ರಾಣ ಭವನ ನಿರ್ಮಿಸಲಾಗಿದೆ. ನಾಲ್ಕು ಮಹಡಿಗಳ ಹೊಸ ಕಟ್ಟಡ 12,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ನಿಗಮದ ಕೇಂದ್ರ ಕಚೇರಿ ಹೊಸ ಕಟ್ಟಡದಿಂದಲೇ ಕಾರ್ಯನಿರ್ವಹಿಸಲಿದೆ.

ಸಮಾರಂಭದಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ‘ರಾಜ್ಯ ಉಗ್ರಾಣ ನಿಗಮವು ಸಹಕಾರ ಇಲಾಖೆಯ ಅಧೀನದ ಸಂಸ್ಥೆಯಾಗಿದೆ. ರಾಜ್ಯದ ಕೋಟ್ಯಂತರ ರೈತರು ಈ ಸಂಸ್ಥೆಯ ಉಪಯೋಗ ಪಡೆಯುತ್ತಿದ್ದಾರೆ. ದರ ಕುಸಿತದ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ರಿಯಾಯತಿ ದರದಲ್ಲಿ ಸ್ಥಳಾವಕಾಶ ಕಲ್ಪಿಸುತ್ತಿರುವ ನಿಗಮವು, ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ’ ಎಂದರು.

ADVERTISEMENT

ರಾಜ್ಯದಾದ್ಯಂತ ಇರುವ ನಿಗಮದ ಉಗ್ರಾಣಗಳಲ್ಲಿ ಕಂಪ್ಯೂಟರೀಕೃತ ಆಡಳಿತ ನಿರ್ವಹಣೆ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಾಮಾನ್ಯ ವರ್ಗದ ರೈತರಿಗೆ ಶೇಕಡ 20ರಷ್ಟು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ರೈತರಿಗೆ ಶೇ 25ರಷ್ಟು ರಿಯಾಯತಿ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ರೈತರಿಂದ ಬೆಂಬಲ ಬೆಲೆ ಭತ್ತ, ರಾಗಿ, ಬಿಳಿಜೋಳ, ತೊಗರಿ, ಕಡಲೆ, ಹೆಸರು ಮತ್ತಿತರ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದೆ. ಆ ಎಲ್ಲ ಉತ್ಪನ್ನಗಳನ್ನೂ ಉಗ್ರಾಣ ನಿಗಮದ ಗೋದಾಮುಗಳಲ್ಲೇ ದಾಸ್ತಾನು ಮಾಡಲಾಗುತ್ತಿದೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ವ್ಯವಸ್ಥಾಪಕ ನಿರ್ದೇಶಕ ರಿಚರ್ಡ್‌ ವಿನ್ಸೆಂಟ್ ಡಿಸೋಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.