
ಬೆಂಗಳೂರು: ‘ಸಾರಿಗೆ ಇಲಾಖೆಯ 31 ಸೇವೆಗಳನ್ನು ಆನ್‌ಲೈನ್ ಮಾಡಿದ್ದರೂ ಆ ಬಗ್ಗೆ ಅರಿವಿಲ್ಲದ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಮಧ್ಯವರ್ತಿಗಳು, ಏಜೆಂಟ್‌ಗಳನ್ನು ಸಂಪರ್ಕಿಸುತ್ತಿದ್ದಾರೆ. ಇದು ಇಲಾಖೆಯ ಘನತೆಗೆ ಧಕ್ಕೆ ತರುತ್ತಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಗುರುವಾರ ನಡೆದ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಆನ್‌ಲೈನ್ ಸೇವೆಗಳ ಮಾಹಿತಿಯನ್ನು ಕಚೇರಿಗಳ ನೋಟಿಸ್ ಬೊರ್ಡ್‌ಗಳಲ್ಲಿ ಹಾಕಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಏಜೆಂಟ್‌ಗಳನ್ನು ಸಂಪರ್ಕಿಸಬೇಡಿ ಎಂದು ಫಲಕ ಪ್ರದರ್ಶಿಸಬೇಕು. ‘ಸಹಾಯ ಮೇಜು’ ಸ್ಥಾಪಿಸಿ ಸರದಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅನಧಿಕೃತ ವ್ಯಕ್ತಿಗಳು ಮತ್ತು ಏಜೆಂಟ್‌ಗಳು ಕಚೇರಿಯ ಒಳಗೆ ಬಾರದಂತೆ ತಡೆಗಟ್ಟಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಹೊಸ ನೋಂದಣಿ ಅರ್ಜಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಬಾಕಿಯಾಗಿರುವುದು ಕಂಡು ಬಂದಿದೆ. ಕೂಡಲೇ ವಿಲೇವಾರಿ ಮಾಡಬೇಕು. ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ನ.30ರ ಒಳಗೆ ಶೇ 100ರಷ್ಟು ವಿಲೇ ಮಾಡಬೇಕು ಎಂದು ಸೂಚನೆ ನೀಡಿದರು.
ವಾಹನಗಳ ನೋಂದಣಿ ಪ್ರಮಾಣಪತ್ರ ಮತ್ತು ಚಾಲನಾ ದೃಢೀಕರಣ ಸ್ಮಾರ್ಟ್‌ಕಾರ್ಡ್‌ಗಳನ್ನು ಸಕಾಲದಲ್ಲಿ ವಿತರಿಸಬೇಕು. ನಂಬರ್ ಪ್ಲೇಟ್ ಅಥವಾ ವಾಹನಗಳ ಮೇಲೆ ಬೇರೆ ಬೇರೆ ಚಿಹ್ನೆ, ಲಾಂಛನ, ಪದನಾಮಗಳನ್ನು ನಮೂದಿಸಿದ್ದರೆ ಅಂಥ ವಾಹನಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು. ಕರ್ನಾಟಕದಲ್ಲಿ ನೋಂದಣಿ ಮಾಡಿಕೊಳ್ಳದೇ ತೆರಿಗೆ ವಂಚಿಸುತ್ತಿರುವ ವಾಹನಗಳನ್ನು ವಶಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾರಿಗೆ ಆಯುಕ್ತ ಎ.ಎಂ. ಯೋಗೀಶ್, ಹೆಚ್ಚುವರಿ ಆಯುಕ್ತರಾದ ಸಿ. ಮಲ್ಲಿಕಾರ್ಜುನ, ಬಿ.ಪಿ. ಉಮಾಶಂಕರ್, ಎಂ.ಪಿ. ಓಂಕಾರೇಶ್ವರಿ, ವಿವಿಧ ವಿಭಾಗಗಳ ಜಂಟಿ ಆಯುಕ್ತರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಉಪಸ್ಥಿತರಿದ್ದರು.
₹ 7451 ಕೋಟಿ ರಾಜಸ್ವ ಸಂಗ್ರಹ
2025–26ನೇ ಸಾಲಿನಲ್ಲಿ ₹ 14457.73 ಕೋಟಿ ರಾಜಸ್ವ ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರವು ಸಾರಿಗೆ ಇಲಾಖೆಗೆ ನಿಗದಿಪಡಿಸಿದ್ದು ಏಳು ತಿಂಗಳಲ್ಲಿ ₹ 7451.45 ಕೋಟಿ ಸಂಗ್ರಹವಾಗಿದೆ ಎಂದು ಸಾರಿಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕಳೆದ ವರ್ಷ ಅಕ್ಟೋಬರ್ ಅಂತ್ಯಕ್ಕೆ ಹೋಲಿಸಿದರೆ ಈ ಬಾರಿ ಅಕ್ಟೋಬರ್ ಅಂತ್ಯಕ್ಕೆ ₹ 505 ಕೋಟಿ ಅಧಿಕ ಮೊತ್ತದ ರಾಜಸ್ವ ಸಂಗ್ರಹವಾಗಿದೆ. 2026ರ ಮಾರ್ಚ್ ಅಂತ್ಯದ ಒಳಗೆ ನಿಗದಿಪಡಿಸಿರುವ ಗುರಿ ಸಾಧಿಸಲಾಗುವುದು ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.