ADVERTISEMENT

ಪಿತೃಪ್ರಧಾನ ವ್ಯವಸ್ಥೆ ಅಧಿಕಾರ, ಅಧೀನತೆಯ ಮಾದರಿ: ಎಚ್.ಎಸ್.ಶ್ರೀಮತಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 23:30 IST
Last Updated 22 ಮಾರ್ಚ್ 2025, 23:30 IST
<div class="paragraphs"><p>ಸಮ್ಮೇಳನಾಧ್ಯಕ್ಷೆ ಎಚ್.ಎಸ್.ಶ್ರೀಮತಿ ಅವರನ್ನು ಜಾನಪದ ಕಲಾ ತಂಡಗಳ ಮೆರವಣಿಗೆಯ ಮೂಲಕ ಲೇಖಕಿಯರ ಸಂಘದ ಪದಾಧಿಕಾರಿಗಳು ಬರಮಾಡಿಕೊಂಡರು</p></div>

ಸಮ್ಮೇಳನಾಧ್ಯಕ್ಷೆ ಎಚ್.ಎಸ್.ಶ್ರೀಮತಿ ಅವರನ್ನು ಜಾನಪದ ಕಲಾ ತಂಡಗಳ ಮೆರವಣಿಗೆಯ ಮೂಲಕ ಲೇಖಕಿಯರ ಸಂಘದ ಪದಾಧಿಕಾರಿಗಳು ಬರಮಾಡಿಕೊಂಡರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪಿತೃ ಪ್ರಧಾನ ವ್ಯವಸ್ಥೆಯನ್ನು ಹೇರುವ ಸಾಮಾಜಿಕ ಚಹರೆಯು ಅಧಿಕಾರ ಮತ್ತು ಅಧೀನತೆಯ ಮಾದರಿಯದಾಗಿದೆ. ಬಲಾಢ್ಯರು ಬಲಹೀನರನ್ನು ತುಳಿದು, ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಸಾಧಿಸುವ ತಂತ್ರಗಾರಿಕೆಯಾಗಿದೆ’ ಎಂದು ಲೇಖಕಿ ಎಚ್‌.ಎಸ್.ಶ್ರೀಮತಿ ಶನಿವಾರ ಪ್ರತಿಪಾದಿಸಿದರು. 

ADVERTISEMENT

ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಏರ್ಪಡಿಸಿದ್ದ ‘ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅರಿವೆಂಬುದು ಬಿಡುಗಡೆ’ ಎಂಬ ಸಮ್ಮೇಳನದ ಆಶಯ ನುಡಿಯನ್ನೇ ಕೇಂದ್ರವಾಗಿರಿಸಿ ಮಾತುಗಳನ್ನು ವಿಸ್ತರಿಸಿದ ಅವರು, ‘ಪಿತೃಪ್ರಧಾನ ವ್ಯವಸ್ಥೆ ರೂಪಿಸಿರುವ ಮಾದರಿಯು ಮಹಿಳೆಯರಲ್ಲಿ ಸೃಷ್ಟಿಸಿರುವ ಸಾಮಾಜಿಕ ತೊಳಲಾಟವನ್ನು ಮೀರುವ ಬಗೆ, ಸ್ತ್ರೀವಾದದ ವಿಶಾಲ ನೆಲೆ ಹೇಗಿರಬೇಕು’ ಎಂದು ವಿಶ್ಲೇಷಿಸಿದರು.

12 ವರ್ಷದ ಬಳಿಕ ನಡೆಯುತ್ತಿರುವ ಸಮ್ಮೇಳನದ ಬಗ್ಗೆ ಶ್ಲಾಘಿಸುತ್ತಲೇ ಮಾತು ಆರಂಭಿಸಿದ ಅವರು, ‘ಸ್ವಂತದ ಚಹರೆಯ ಅರಿವಿನಿಂದಲೇ ನಮ್ಮ ಅರಿವಿನ ಪಯಣ ಮೊದಲಾಗಬೇಕು. ಇಲ್ಲವಾದರೆ ನಮ್ಮ ಅರಿವು ಬೌದ್ಧಿಕ ನೆಲೆಗೆ ತಲುಪ‍ಬಹುದೇ ಹೊರತು, ಬದುಕಿನ ಭಾಗವಾಗಿ ಉಳಿಯದು’ ಎಂದು ಎಚ್ಚರಿಸಿದರು.

‘ಸಾಮಾಜಿಕ ಚಹರೆ ಎಂಬುದು ಆಳ್ವಿಕೆಯ ಪ್ರಾಬಲ್ಯಕ್ಕಾಗಿ ಜಾರಿಗೊಳಿಸಿದ ಒಂದು ರಾಜಕಾರಣ ಹಾಗೂ ತಂತ್ರಗಾರಿಕೆ. ಮನುಷ್ಯ ಚರಿತ್ರೆಯ ಒಂದು ಹಂತದಲ್ಲಿ ಪಿತೃಪ್ರಧಾನ ವ್ಯವಸ್ಥೆಯು ಪ್ರಭಾವಶಾಲಿಯಾಗಿ ನೆಲಸಿದ  ಮೇಲೆ ಸಾಮಾಜಿಕ ಚಹರೆ ಎಂಬ ಈ ತಂತ್ರಗಾರಿಕೆಯು ನಮ್ಮೆಲ್ಲರ ಮೇಲೂ ಅಧಿಕಾರ ಸ್ಥಾಪಿಸಿಬಿಟ್ಟಿದೆ’ ಎಂದರು. 

‘ಪಿತೃಪ್ರಧಾನ ವ್ಯವಸ್ಥೆ ಅಂದರೆ ಅಪ್ಪನೇ ಮುಖ್ಯಸ್ಥನೆಂದು ಬಿಂಬಿಸಲಾಗಿದೆ. ವಂಶದ ಕಲ್ಪನೆಯಲ್ಲಿ ಗಂಡು ಮಕ್ಕಳನ್ನು ಬೆಳೆಸಲಾಗುತ್ತಿದೆ. ಮನೆಯಲ್ಲಿ ಹುಟ್ಟಿದ ಮಗಳು ವಂಶವಲ್ಲವೆ’ ಎಂದು ಶ್ರೀಮತಿ ಪ್ರಶ್ನಿಸಿದರು.

‘ಮನೆ, ಸಂಬಂಧ, ಸಾರ್ವಜನಿಕ ವಲಯ, ಕೊನೆಗೆ ಸಂತೆ ಮಾರುಕಟ್ಟೆಗಳಲ್ಲೂ ಹೆಣ್ಣು ಗಂಡು ನಡುವೆ ಅಧಿಕಾರ–ಅಧೀನತೆಯ ಸಂಬಂಧಗಳೇ ಕಾಣುತ್ತವೆ. ನಮ್ಮ ಸಾಮಾಜಿಕ ಚಿಂತನೆ, ಪಿತೃಪ್ರಧಾನದ ಸಮೀಕರಣ ಬದಲಾಗಬೇಕು. ಸ್ತ್ರೀವಾದವು ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಬೇಕು ಎನ್ನುತ್ತದೆ. ಆದ್ದರಿಂದ ಪಿತೃಪ್ರಧಾನ ಕಲಿಸಿದ ಸಾಮಾಜೀಕರಣದ ಪಾಠಗಳನ್ನು ಮರೆತು, ಅದರಿಂದ ಹೊರಬರಬೇಕು. ಹಿರಿಯರು ಅನುಭವಗಳನ್ನು ಹೊಸ ತಲೆಮಾರಿನವರ ಜೊತೆ ಹಂಚಿಕೊಳ್ಳುವ ಮೂಲಕ ದಾರಿ ತೋರಿಸಬೇಕು’ ಎಂದು ಸಲಹೆ ಮಾಡಿದರು. 

ಇದಕ್ಕೂ ಮೊದಲು ಜಾನಪದ ಕಲಾ ತಂಡಗಳ ಮೆರವಣಿಗೆ ಮೂಲಕ ಸಮ್ಮೇಳನಾಧ್ಯಕ್ಷೆ ಶ್ರೀಮತಿ ಅವರನ್ನು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ಕಾರ್ಯದರ್ಶಿ ಭಾರತಿ ಹೆಗಡೆ, ಪದಾಧಿಕಾರಿಗಳು ಬರಮಾಡಿಕೊಂಡರು. 

ರಾಜಕೀಯದಿಂದಾಗಿ ಮಹಿಳೆ ಸುರಕ್ಷಿತವಾಗಿ ಇರಲಾಗುತ್ತಿಲ್ಲ. ಆಕೆಗೆ ಒಂದೆಡೆ ಅವಕಾಶ ತೆರೆದುಕೊಂಡರೆ ಇನ್ನೊಂದೆಡೆ ಅಸ್ತಿತ್ವವೇ ಇರದಂತೆ ಮಾಡುವ ಹಿಂಸೆ ನಡೆಯುತ್ತಿದೆ
ರಾಜೇಂದ್ರ ಚೆನ್ನಿ ವಿಮರ್ಶಕ
ಮನುಷ್ಯರನ್ನು ಬದಲಾಯಿಸುವ ಶಕ್ತಿ ಬರವಣಿಗೆಗೆ ಇದೆ. ಪುರುಷರ ಯಶಸ್ಸಿನ ಹಿಂದೆ ಮಹಿಳೆಯರಿದ್ದಾರೆ. ಮುಂದಿನ ಸಮ್ಮೇಳನವನ್ನು ಗಡಿಭಾಗದಲ್ಲಿ ನಡೆಸಿ
ಸೋಮಣ್ಣ ಬೇವಿನಮರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
‘ಪುರುಷರು ನಮ್ಮ ಶತ್ರುಗಳಲ್ಲ’
‘ಪುರುಷರು ಕೂಡಾ ತಮ್ಮ ಸ್ವಂತ ಚಹರೆಯ ಗೊಂದಲದಲ್ಲಿ ಇದ್ದಾರೆ. ನಾವು ವ್ಯವಸ್ಥೆಯ ವಿರುದ್ಧ ಇದ್ದೆವೆಯೇ ಹೊರತು, ಪುರುಷರ ವಿರುದ್ಧವಲ್ಲ. ಸ್ತ್ರೀಯರ ಮೇಲೆ ಆಕ್ರಮಣ, ದಬ್ಬಾಳಿಕೆ, ಹಿಂಸೆ ಮತ್ತು ದೌರ್ಜನ್ಯವನ್ನು ನಡೆಸುವುದಿಲ್ಲ ಎಂಬ ತೀರ್ಮಾನ ವನ್ನು ಪುರುಷರು ಕೈಗೊಳ್ಳಬೇಕು. ಸ್ತ್ರೀಯರ ಜೀವನದಲ್ಲಿ ಪ್ರೀತಿ ಯನ್ನು ತುಂಬಬೇಕು’ ಎಂದು ಎಚ್.ಎಸ್.ಶ್ರೀಮತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.