‘ಕರುನಾಡ ಸವಿಯೂಟ’ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸವಿತಾ ಜಿ. ಮಯ್ಯ, ದ್ವಿತೀಯ ಪ್ರಶಸ್ತಿ ಪಡೆದ ಉಮಾ ಜಗನ್ನಾಥ್, ಪ್ರಥಮ ಸ್ಥಾನ ಪಡೆದ ಎಲಿಜಬೆತ್ ಎಚ್. ಅವರಿಗೆ ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ಬ್ರ್ಯಾಂಡ್ ಮ್ಯಾನೇಜರ್ ಹರ್ಷ್ ರತ್ತೋಗಿ, ನಿರೂಪಕಿ ಸುಚಿತ್ರಾ ಮತ್ತು ‘ಒಗ್ಗರಣೆ ಡಬ್ಬಿ’ ಮುರಳಿ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕರುನಾಡ ಸವಿಯೂಟ’ 4ನೇ ಆವೃತ್ತಿಯ ಅಡುಗೆ ಸ್ಪರ್ಧೆಯಲ್ಲಿ ರಾಮಮೂರ್ತಿನಗರದ ಎಲಿಜಬೆತ್ ಅವರು ಪ್ರಥಮ ಸ್ಥಾನದೊಂದಿಗೆ ₹10 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಎಲಿಜಬೆತ್ ಅವರು ತಯಾರಿಸಿ ತಂದಿದ್ದ ‘ರಾಗಿ ಡೆಸಾರ್ಟ್’ ಎಂಬ ಹೊಸ ಪ್ರಯೋಗದ ತಿನಿಸು ಅವರನ್ನು ಮೊದಲ ಸ್ಥಾನಕ್ಕೆ ತಂದು ಕೂರಿಸಿತು. ‘ನನಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕೆ ‘ಪ್ರಜಾವಾಣಿ’, ’ಡೆಕ್ಕನ್ ಹೆರಾಲ್ಡ್’ಗೆ ಋಣಿಯಾಗಿದ್ದೇನೆ. ಮತ್ತೆ ಸ್ಪರ್ಧೆ ಮಾಡಿದರೆ ಸಸ್ಯಾಹಾರ ಮತ್ತು ಮಾಂಸಾಹಾರದಲ್ಲಿ ವಿಭಿನ್ನ ಆಹಾರ ತಯಾರಿಸಿ ತರುತ್ತೇನೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸದಾಶಿವನಗರದ ಉಮಾ ಜಗನ್ನಾಥ್ ಅವರು ತಯಾರಿಸಿದ್ದ ಕೋಳಿ ರವಾ ಬಾತ್ ಮಾಂಸಾಹಾರದಲ್ಲಿಯೇ ಹೊಸ ಪ್ರಯೋಗವಾಗಿ ಕಣ್ಮನ–ನಾಲಿಗೆ ಸೆಳೆಯಿತು. ಇದಕ್ಕೆ ದ್ವಿತೀಯ ಸ್ಥಾನ ಪಡೆದ ಅವರು ₹5,000 ನಗದು ಅನ್ನು ತಮ್ಮದಾಗಿಸಿಕೊಂಡರು. ‘ಚಿಕನ್ ಪುಲಾವ್ ಮಾಡುತ್ತಾರೆ. ರವಾ ಬಾತ್ ಮಾಡುತ್ತಾರೆ. ನಾನು ಆ ರೆಸಿಪಿಗಳನ್ನು ಇಟ್ಟುಕೊಂಡು ಚಿಕನ್ ರವಾ ಬಾತ್ ಮಾಡಿದೆ’ ಎಂದು ಅವರು ವಿವರ ನೀಡಿದರು.
ಕರಾವಳಿ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿರುವ ಕೊಟ್ಟೆಕಡುಬನ್ನು ತಯಾರಿಸಿದ್ದ ವಿಜಯನಗರದ ಸವಿತಾ ಜಿ. ಮಯ್ಯ ತೃತೀಯ ಸ್ಥಾನದೊಂದಿಗೆ ₹3,000 ನಗದು ಪಡೆದರು. ‘ನನಗೆ ಪ್ರಶಸ್ತಿ ಬಂದಿರುವುದು ಅಚ್ಚರಿ ಮತ್ತು ಸಂತೋಷ ಒಟ್ಟಿಗೆ ಉಂಟು ಮಾಡಿದೆ’ ಎಂದು ಖುಷಿ ಹಂಚಿಕೊಂಡರು.
ಶಾದಿ ಕ ಬಿರಿಯಾನಿ, ಅಕ್ಕಿ ಪಾಯಸ, ಚಪಾತಿ–ಚಿಕನ್ ಗ್ರೇವಿ ತಯಾರಿಸಿದ್ದ ಲಿಂಗರಾಜಪುರದ ಮೀನಾ ಮತ್ತು ಹಲ್ವಾ ಸಮೋಸ ತಯಾರಿಸಿದ್ದ ಲತಾ ಅವರು ಮೆಚ್ಚುಗೆ ಪಡೆದ ಸ್ಪರ್ಧಿಗಳಾಗಿ ಸಮಾಧಾನಕರ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡವರಲ್ಲಿ ಒಬ್ಬರನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಯಿತು. ಕರುನಾಡ ಸವಿಯೂಟದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಅತ್ಯುತ್ತಮ ‘ಪೋಸ್ಟ್’ಗೂ ಬಹುಮಾನ ವಿತರಿಸಲಾಯಿತು.
‘ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಬಹಳ ಖುಷಿಯಾಗಿದೆ. ಇಲ್ಲಿಗೆ ಬರುವವರೆಗೆ ಸ್ಪರ್ಧೆ ಹೇಗಿರುತ್ತದೆ ಎಂಬ ಕಲ್ಪನೆ ನನಗಿರಲಿಲ್ಲ. ಇಲ್ಲಿ ಬಂದು ತಿಳಿದುಕೊಂಡೆ. ಮುಂದಿನ ಬಾರಿ ಮೀನಿನ ಖಾದ್ಯಗಳನ್ನು ತರುತ್ತೇನೆ’ ಎಂದು ವಿಜಯನಗರದ ನಿವಾಸಿ, ಕೆನರಾ ಬ್ಯಾಂಕ್ ಉದ್ಯೋಗಿ ಭಾಗ್ಯಶ್ರೀ ತಿಳಿಸಿದರು.
‘ಮೊದಲ ಬಾರಿ ಭಾಗವಹಿಸಿದ್ದೇನೆ. ಇಲ್ಲಿ ಅನೇಕರು ಪರಿಚಯವಾದರು. ಮುಂದೆ ಬೆಂಗಳೂರಿನಲ್ಲಿ ಎಲ್ಲೇ ಅಡುಗೆ ಸ್ಪರ್ಧೆ ಇದ್ದರೂ ಭಾಗವಹಿಸುತ್ತೇನೆ’ ಎಂದು ತೇಜಸ್ವಿನಿ ತಿಳಿಸಿದರೆ, ‘ನನ್ನ ಅಮ್ಮ ಗಂಗಮ್ಮ ಮಟನ್ ಬಿರಿಯಾನಿ ಮಾಡುವುದರಲ್ಲಿ ಎತ್ತಿದಕೈ. ಅವರಿಂದ ನಾನೂ ಕಲಿತು ಇವತ್ತು ಮಟನ್ ಬಿರಿಯಾನಿ ತಂದಿದ್ದೇನೆ’ ಎಂದು ರುಕ್ಮಿಣಿ ಹೇಳಿದರು.
ಸ್ಪರ್ಧಿಗಳಲ್ಲಿ ಒಬ್ಬರಾದ ವಿದ್ಯಾಶ್ರೀ ಅವರು ‘ಬೆಳಗನ್ನು ನಾಷ್ಟ ನುಂಗಿತ್ತಾ..’ ಎಂದು ಹಾಡಿ ರಂಜಿಸಿದರು. ಜರ್ಮನಿಯಿಂದ ಯಾತ್ರಾರ್ಥಿಯಾಗಿ ಭಾನುವಾರವಷ್ಟೇ ಬೆಂಗಳೂರಿಗೆ ಬಂದಿದ್ದ ಲೂಸ್ ಅವರು ಇಲ್ಲಿನ ಆಹಾರ ಸವಿದು ‘ವೆರಿನೈಸ್’ ಎಂದು ಉದ್ಗರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.