ADVERTISEMENT

ಕಸಾಪ ವ್ಯವಹಾರದ ನ್ಯಾಯಾಂಗ ತನಿಖೆ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 11:00 IST
Last Updated 8 ಜನವರಿ 2026, 11:00 IST
ಮಹೇಶ ಜೋಶಿ ಕಸಾಪ ಅಧ್ಯಕ್ಷ 
ಮಹೇಶ ಜೋಶಿ ಕಸಾಪ ಅಧ್ಯಕ್ಷ    

ಬೆಂಗಳೂರು: ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷರಾಗಿದ್ದ ಅವಧಿಯ ವ್ಯವಹಾರಗಳ ಬಗೆಗಿನ ತನಿಖೆಗೆ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗ ರಚಿಸುವ ಬಗ್ಗೆ ವರದಿ ನೀಡಿ ಎಂದು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರನ್ನು ಬುಧವಾರವಷ್ಟೇ ಭೇಟಿ ಮಾಡಿದ್ದ ಮಹೇಶ ಜೋಶಿ, ‘ಕೆಲವರು ದುರುದ್ದೇಶದಿಂದ ಕಸಾಪ, ನನ್ನ ಮೇಲೆ ಮತ್ತು ಕಾರ್ಯಕಾರಿ ಸಮಿತಿಯ ವಿರುದ್ಧ ಅಪಪ್ರಚಾರ ಮಾಡಿಸುತ್ತಾ, ನಿರಂತರ ದೂರು ನೀಡುತ್ತಿದ್ದಾರೆ.  ಕಸಾಪ ಹಾಗೂ ನನ್ನನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ವಿಚಾರಣಾಧಿಕಾರಿಯು ವಿಚಾರಣೆ ನಡೆಸದೆ ವರದಿ ನೀಡುವ ಬಗ್ಗೆ ಅನುಮಾನವಿದೆ. ಹೀಗಾಗಿ, ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಕೋರಿದ್ದರು.

‘ರಾಜಕೀಯ ನಂಟು ಹೊಂದಿರುವ ಮಂಡ್ಯದ ಪ್ರೊ. ಜಯಪ್ರಕಾಶ್ ಗೌಡ, ಕೆ.ಟಿ. ಶ್ರೀಕಂಠೇಗೌಡ, ರಾಮನಗರದ ಸಿ.ಕೆ. ರಾಮೇಗೌಡ, ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ವಸುಂಧರಾ ಭೂಪತಿ, ಆರ್.ಜಿ.ಹಳ್ಳಿ ನಾಗರಾಜ್, ಹಂಪ ನಾಗರಾಜಯ್ಯ ಮೊದಲಾದ ಬೆರಳೆಣಿಕೆಯಷ್ಟು ಮಂದಿ ಪೂರ್ವಗ್ರಹ ಪೀಡಿತರಾಗಿದ್ದಾರೆ. ಅಂತಹವರು ನೀಡಿರುವ ದೂರು ಆಧರಿಸಿ ವಿಚಾರಣಾಧಿಕಾರಿಗಳನ್ನು ನೇಮಿಸಲಾಗಿದೆ. ಈ ಕಾರಣಕ್ಕೆ ನಡೆಯುತ್ತಿರುವ ವಿಚಾರಣೆಯು ನಿಷ್ಪಕ್ಷಪಾತ ಹಾಗೂ ನ್ಯಾಯೋಚಿತವಾಗಿ ನಡೆಯುತ್ತಿದೆ ಎಂಬ ವಿಶ್ವಾಸವಿಲ್ಲ’ ಎಂದು ವಿವರಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.