
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಸಂಚಿತ ವೇತನದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನಕ್ಕಾಗಿ ಕಸಾಪ ಆಡಳಿತಾಧಿಕಾರಿ ಕೆ.ಎಂ.ಗಾಯಿತ್ರಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪರಿಷತ್ತಿನಲ್ಲಿ ಒಟ್ಟು 46 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಚಿತ ವೇತನದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅಕ್ಟೋಬರ್ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ಗಾಯಿತ್ರಿ ಅವರು 2025ರ ನವೆಂಬರ್‌ನಲ್ಲಿಯೂ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಸೂಕ್ತ ನಿರ್ದೇಶನ ದೊರೆಯದ ಕಾರಣ ಮತ್ತೊಮ್ಮೆ ಪತ್ರ ಬರೆದಿದ್ದಾರೆ.
‘ಸಿಬ್ಬಂದಿಯಲ್ಲಿ ಇಬ್ಬರು ಮಾತ್ರ ಕಾಯಂ ನೌಕರರಾಗಿದ್ದು, ಅವರಿಗೆ ಸರ್ಕಾರದ ನಿಯಮಾನುಸಾರ ವೇತನ ನೀಡಲಾಗಿದೆ’ ಎಂದು ಪತ್ರದಲ್ಲಿ ತಿಳಿಸಿರುವ ಆಡಳಿತಾಧಿಕಾರಿ, ಹಲವರನ್ನು ಸರ್ಕಾರದ ಅನುಮತಿ ಪಡೆಯದೆ ಭರ್ತಿ ಮಾಡಿಕೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ನಿಯಮದ ಪ್ರಕಾರ ಸರ್ಕಾರದ ಅನುಮತಿ ಪಡೆದೇ ನೇಮಕ ಮಾಡಿಕೊಳ್ಳಬೇಕಾದ ಕಾರಣ, ಪರಿಷತ್ತಿನಲ್ಲಿ ಸಂಚಿತ ವೇತನದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಕೋರಿದ್ದಾರೆ.
ಭಿಕ್ಷೆ ಪ್ರತಿಭಟನೆ ಮುಂದೂಡಿಕೆ
ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ಮೂರು ತಿಂಗಳಿಂದ ವೇತನ ನೀಡದಿರುವುದನ್ನು ಖಂಡಿಸಿ ಪರಿಷತ್ತಿನ ಮುಂಭಾಗ ಬುಧವಾರ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದ ಭಿಕ್ಷೆ ಪ್ರತಿಭಟನೆಯನ್ನು ಕರ್ನಾಟಕ ವಿಕಾಸರಂಗ ಮುಂದೂಡಿದೆ.
‘ವೇತನ ಬಿಡುಗಡೆಗಾಗಿ ಸಂಬಂಧಪಟ್ಟವರ ಜತೆಗೆ ಮಾತನಾಡಿದ್ದೇವೆ. ಸಾಹಿತಿಗಳು ಸಲಹೆ ಮೇರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ’ ಎಂದು ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.