ADVERTISEMENT

ತಿಂಗಳಾಂತ್ಯಕ್ಕೆ ಕೆಂಪೇಗೌಡ ಪ್ರಶಸ್ತಿ ಪ್ರದಾನ: ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 23:30 IST
Last Updated 18 ಜುಲೈ 2023, 23:30 IST
ಶಾಸಕ ರಾಮಲಿಂಗಾರೆಡ್ಡಿ
ಶಾಸಕ ರಾಮಲಿಂಗಾರೆಡ್ಡಿ   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 28 ಅಥವಾ ಈ ತಿಂಗಳಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಯ ನೀಡುವ ದಿನ ಸಮಾರಂಭ ನಡೆಯಲಿದೆ. ಸದ್ಯಕ್ಕೆ 28ಕ್ಕೆ ನಡೆಸುವ ಯೋಜನೆ ಇದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಪ್ರಥಮ ಸಭೆ ಮಂಗಳವಾರ ನಡೆಯಿತು. 

ADVERTISEMENT

‘ಒಟ್ಟು 198 ಮಂದಿಗೆ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದ್ದು, ವಾರ್ಡ್‌ಗೆ ಒಂದು ಎಂದೇನೂ ಇರುವುದಿಲ್ಲ. ನಮ್ಮ ಮಾನದಂಡಗಳ ಪ್ರಕಾರ ಒಂದು ವಾರ್ಡ್‌ನಲ್ಲಿ ಇಬ್ಬರು ಇರಬಹುದು, ಇನ್ನೊಂದರಲ್ಲಿ ಯಾರೂ ಇಲ್ಲದಿರಬಹುದು. ಎಲ್ಲ ವಲಯಗಳಿಂದ ಈಗಾಗಲೇ ಪಟ್ಟಿ ಬಂದಿದೆ. ಜುಲೈ 25ಕ್ಕೆ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು’ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಡಿಸೆಂಬರ್‌ಗೆ ಚುನಾವಣೆ: ‘ಲೋಕಸಭೆ ಚುನಾವಣೆ ಯಾವಾಗಲಾದರೂ ನಡೆಯಲಿ. ಬಿಬಿಎಂಪಿ ಚುನಾವಣೆಯನ್ನು ಡಿಸೆಂಬರ್‌ನಲ್ಲಿ ನಡೆಸಲು ನಾವು ಬದ್ದರಾಗಿದ್ದೇವೆ’ ಎಂದು ರಾಮಲಿಂಗಾರೆಡ್ಡಿ ಪುನರುಚ್ಚರಿಸಿದರು.

ವಾರ್ಡ್‌ಗಳ ಪುನರ್‌ರಚನೆಗೆ ಸರ್ಕಾರ ಸಮಿತಿ ರಚಿಸಿದ್ದು, 225ರಿಂದ 250 ವಾರ್ಡ್‌ ಮಾಡಬಹುದು. 243 ಉಳಿಯಬಹುದು ಅಥವಾ ಕೆಲವು ಕಡಿಮೆಯಾಗಬಹುದು. ಹಿಂದೆ ಬಿಜೆಪಿಯವರು ಕಾಂಗ್ರೆಸ್‌ಗೆ ವಿರುದ್ಧವಾಗಿ ವಾರ್ಡ್‌ಗಳ ಗಡಿ ಗುರುತಿಸಿದ್ದರು. ಅವುಗಳನ್ನೆಲ್ಲ ವೈಜ್ಞಾನಿಕವಾಗಿ ಸರಿಪಡಿಸಲು ಹೇಳಲಾಗಿದೆ. ಸಮಿತಿ ವರದಿ ನೀಡಿದ ಮೇಲೆ, ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.

ವೆಚ್ಚ ಹೆಚ್ಚಿಲ್ಲ: ಕೆಂಪೇಗೌಡ ಜಯಂತಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಳೆದ ಬಾರಿ ಎಷ್ಟು ವೆಚ್ಚ ಮಾಡಲಾಗಿತ್ತೋ ಅದಕ್ಕಿಂತ ಹೆಚ್ಚಿನ ವೆಚ್ಚ ಮಾಡುವುದಿಲ್ಲ. ಎಲ್ಲ ರೀತಿಯ ಸಿದ್ಧತೆಯನ್ನೂ ಬಿಬಿಎಂಪಿ ಮಾಡಿಕೊಂಡಿದ್ದು, ಮುಖ್ಯಮಂತ್ರಿಯವರ ಸಮಯ ನೋಡಿಕೊಂಡು ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.