ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ವಾಪಸ್ ನೀಡುವಂತೆ ಯಶವಂತಪುರ ಹೋಬಳಿಯ ಸ್ಕಂದ ನಗರ ನಿವಾಸಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಕೊಡಿಗೆಹಳ್ಳಿಯ ಸರ್ವೆ ನಂ. 53/6ಪಿ ನಲ್ಲಿರುವ ಸ್ಕಂದ ನಗರದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು 20 ವರ್ಷಗಳಿಂದ ವಾಸವಿದ್ದು, ನಿಯಮಿತವಾಗಿ ತೆರಿಗೆ ಪಾವತಿಸುತ್ತಿವೆ.
‘ಕೊಡಿಗೆಹಳ್ಳಿಯ ಸರ್ವೆ ನಂಬರ್ 53/6 ಪಿ ನಲ್ಲಿ ರಚಿಸಲಾದ ಕಂದಾಯ ನಿವೇಶನಗಳನ್ನು ಉಳ್ಳಾಲು ಗಾಳಪ್ಪ ಮತ್ತು ಅವರ ಕುಟುಂಬದಿಂದ 2006ರಲ್ಲಿ ಕ್ರಯಪತ್ರದ ಮೂಲಕ ಖರೀದಿಸಿ, ಪಂಚಾಯಿತಿಯಿಂದ ಖಾತೆ ಪಡೆದುಕೊಳ್ಳಲಾಗಿತ್ತು. ಮನೆ ಕಟ್ಟಿಕೊಂಡು, ನೀರು, ವಿದ್ಯುತ್ ಸಂಪರ್ಕ, ರಸ್ತೆ ಸೌಲಭ್ಯ ಕಲ್ಪಿಸಲಾಗಿದೆ. ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿಗೆ ತೆರಿಗೆಯನ್ನೂ ಪಾವತಿಸಲಾಗುತ್ತಿದೆ’ ಎಂದು ನಿವಾಸಿ ರಾಜಣ್ಣ ತಿಳಿಸಿದ್ದಾರೆ.
‘2008ರಲ್ಲಿ ಬಿಡಿಎ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತು. ಆಗಿನಿಂದಲೂ ಮನೆ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲಾಯಿತು. ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು, ನಿವೇಶನಗಳನ್ನು ನಿಯಮಿತಗೊಳಿಸಿ, ಖಾತೆ ನೀಡುವಂತೆ ಹೈಕೋರ್ಟ್ ಬಿಡಿಎಗೆ ಆದೇಶ ನೀಡಿತು’ ಎಂದು ತಿಳಿಸಿದ್ದಾರೆ.
‘ಕೋರ್ಟ್ ಆದೇಶಕ್ಕೆ ಬಿಡಿಎ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ 2024ರಲ್ಲಿ ಮತ್ತೆ ಹೈಕೋರ್ಟ್ ಮೊರೆ ಹೋದ ಸಂದರ್ಭದಲ್ಲಿ, ನಾಲ್ಕು ತಿಂಗಳೊಳಗಾಗಿ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು, ಖಾತೆ ನೀಡುವಂತೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ಪ್ರತಿಯನ್ನು ಬಿಡಿಎ ಕಚೇರಿಗೆ ಸಲ್ಲಿಸಲಾಗಿದೆ. ಮನವಿ ಸ್ವೀಕರಿಸಿ, ಹಿಂಬರಹ ಕೊಟ್ಟಿದ್ದಾರೆ. ಆದರೆ, ಈವರೆಗೂ ಪ್ರಕ್ರಿಯೆ ಆರಂಭಿಸಿಲ್ಲ’ ಎಂದು ನಿವಾಸಿ ಎಸ್.ಕೆ.ನಾಗರತ್ನ ಬೇಸರ ವ್ಯಕ್ತಪಡಿಸಿದರು.
‘ಈ ನಡುವೆ, ನಿವೇಶನಗಳನ್ನು ರಚಿಸಿ ಮಾರಾಟ ಮಾಡಿದ ಜಮೀನಿಗೂ ಗಾಳಪ್ಪ ಅವರ ಕುಟುಂಬವು ಬಿಡಿಎಯಿಂದ 2022ರಲ್ಲಿ ಪರಿಹಾರ ಹಾಗೂ ಬದಲಿ ನಿವೇಶನಗಳನ್ನು ಪಡೆದುಕೊಂಡಿದೆ. ಇದು ಅಕ್ರಮ. ಗಾಳಪ್ಪ ಅವರಿಂದ ಜಮೀನು ಖರೀದಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ. ಆದರೆ, ನಿವೇಶನ ಖರೀದಿಸಿದವರ ಅಹವಾಲುಗಳನ್ನು ಅಧಿಕಾರಿಗಳು ಆಲಿಸಿಲ್ಲ’ ಎಂದು ಅಳಲು ತೋಡಿಕೊಂಡರು.
‘ನ್ಯಾಯ ಬದ್ಧವಾಗಿ ನಿವೇಶನ ಖರೀದಿಸಿ, ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡಿಎಗೆ ಹಾಜರುಪಡಿಸಲಾಗಿದೆ. ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ನ್ಯಾಯಾಲಯದ ಆದೇಶ ಪಾಲಿಸಬೇಕು. ಅಭಿವೃದ್ಧಿ ಶುಲ್ಕ ಪಡೆದುಕೊಂಡು, ಖಾತೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.