ADVERTISEMENT

ಕೆಂಪೇಗೌಡ ಬಡಾವಣೆ: ಭೂ ಮಾಲೀಕರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 16:15 IST
Last Updated 2 ಡಿಸೆಂಬರ್ 2024, 16:15 IST
ನಾಡಪ್ರಭು ಕೆಂಪೇಗೌಡ ಬಡಾವಣೆ.
ನಾಡಪ್ರಭು ಕೆಂಪೇಗೌಡ ಬಡಾವಣೆ.   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್‌ಪಿಕೆಎಲ್) ನಿರ್ಮಾಣಕ್ಕೆ ಬಾಕಿ ಇರುವ 600 ಎಕರೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಭೂ ಮಾಲೀಕರಿಗೆ ನೋಟಿಸ್ ನೀಡಲು ಆರಂಭಿಸಿದೆ.

ಭೂ ಸ್ವಾಧೀನ ಪ್ರಶ್ನಿಸಿ ಭೂಮಾಲೀಕರು ಮತ್ತು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಬಡಾವಣೆಗಾಗಿ 4,040 ಎಕರೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಈ ಹಿಂದೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಈವರೆಗೆ 2,682 ಎಕರೆ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ಇಲಾಖೆಗೆ ಹಸ್ತಾಂತರಿಸಲಾಗಿದೆ.

ADVERTISEMENT

ಈ ಪೈಕಿ 2,200 ಎಕರೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ, ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 482 ಎಕರೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಅಲ್ಲದೇ 1,300 ಎಕರೆಗಿಂತ ಹೆಚ್ಚು ಜಮೀನು ಇನ್ನೂ ಸ್ವಾಧೀನಕ್ಕೆ ಬಾಕಿ ಇದೆ.

‘ಭೂ ಮಾಲೀಕರಿಗೆ ನೋಟಿಸ್ ನೀಡಲು ಪ್ರಾರಂಭಿಸಿದ್ದು, ಶೀಘ್ರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಈ ಜಾಗ ಅಭಿವೃದ್ಧಿ ಪಡಿಸಿದ ಬಳಿಕ ನಿವೇಶನ ಹಂಚಿಕೆಯ ಬಗ್ಗೆ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿದೆ’  ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.