ADVERTISEMENT

ಪಾಲಿಕೆ ಸದಸ್ಯರಿಂದ ಸೇವಾಠಾಣೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:57 IST
Last Updated 13 ಮೇ 2019, 19:57 IST
ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ ಅವರ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ ಅವರ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು.   

ಕೆಂಗೇರಿ: ‘ಜಲಮಂಡಳಿ ಅಧಿಕಾರಿಗಳು ಸಮರ್ಪಕವಾಗಿ ಕಾವೇರಿ ನೀರು ಸರಬರಾಜು ಮಾಡುತ್ತಿಲ್ಲ’ ಎಂದು ಆರೋಪಿಸಿ ಕೆಂಗೇರಿ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಕೆಂಗೇರಿ ವಾರ್ಡ್‌ನ ಕಾರ್ಪೊರೇಟರ್‌ ವಿ.ವಿ.ಸತ್ಯನಾರಾಯಣ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ನಾಲ್ಕು ದಿನಗಳಿಗೆ ಒಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯಲು ಬಾಟಲ್‌ ನೀರಿನ ಮೇಲೆ ಅವಲಂಬಿತರಾಗಿದ್ದೇವೆ. ಸಮಸ್ಯೆ ಹೆಚ್ಚುತ್ತಿದ್ದರೂ ಅಧಿಕಾರಿಗಳು ಕ್ರಮ ವಹಿಸದೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ’ ಎಂದುಜಲಮಂಡಳಿಯ ಕೆಂಗೇರಿ ಉಪನಗರ ಸೇವಾಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ’ ಎಂದು ಕೆಂಗೇರಿ ಉಪನಗರ, ಸುಭಾಷ ನಗರ, ಎಂ.ಟಿ.ಎಸ್.ಬಡಾವಣೆ ನಿವಾಸಿಗಳು ಎಚ್ಚರಿಕೆ ನೀಡಿದರು.

ADVERTISEMENT

ವಿ.ವಿ.ಸತ್ಯನಾರಾಯಣ,‘ಕೆಂಗೇರಿ ಸುತ್ತಮುತ್ತ ನೀರಿಗಾಗಿ ಹಾಹಾಕಾರ ಎದುರಾಗಿದೆ. ಜಲಮಂಡಳಿ ಅಧಿಕಾರಿಗಳು ಬಿ.ಜೆ.ಪಿ.ಯಿಂದ ಆಯ್ಕೆಯಾಗಿರುವ ಪಾಲಿಕೆ ಸದಸ್ಯರಿರುವ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ಭರವಸೆ: ನಿವಾಸಿಗಳಿಂದ ಮನವಿ ಪತ್ರ ಸ್ವೀಕರಿಸಿದ ಜಲಮಂಡಳಿಯ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಮಹೇಶ್,‘ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

‘ನೀರು ಸರಬರಾಜಿನಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ತಿಳಿಸಿದರು.

ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅಶೋಕ್ ಗೌಡ, ಸಹಾಯಕ ಎಂಜಿನಿಯರ್‌ ಚನ್ನಪ್ಪ ಅವರು ನಾಗರಿಕರ ಮನವಿಗಳನ್ನು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.