ADVERTISEMENT

ಕೆಂಗೇರಿ– ಉತ್ತರಹಳ್ಳಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 21:39 IST
Last Updated 29 ಆಗಸ್ಟ್ 2021, 21:39 IST
ಕಾಮಗಾರಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ರಾಕೇಶ್ ಸಿಂಗ್, ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಪ್ರಹ್ಲಾದ್ ಮತ್ತಿತರರು ಇದ್ದಾರೆ
ಕಾಮಗಾರಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ರಾಕೇಶ್ ಸಿಂಗ್, ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಪ್ರಹ್ಲಾದ್ ಮತ್ತಿತರರು ಇದ್ದಾರೆ   

ಕೆಂಗೇರಿ: ಒಂದೂವರೆ ದಶಕಗಳ ದೀರ್ಘ ಭರವಸೆಯಾದ ಕೆಂಗೇರಿ– ಉತ್ತರಹಳ್ಳಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಗೆ ಭಾನುವಾರ ಗುದ್ದಲಿಪೂಜೆ ನೆರವೇರಿತು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆಂಗೇರಿ– ಉತ್ತರಹಳ್ಳಿ ರಸ್ತೆ ವಿಸ್ತರಣೆಗೆ 2007ರಲ್ಲೇ ಯೋಜನೆ ಸಿದ್ಧಪಡಿಸಲಾಗಿತ್ತು. ರಸ್ತೆಯಲ್ಲಿರುವ ನಿವೇಶನ ಮಾಲೀಕರಿಗೆ 18 ಅಡಿಗಳಷ್ಟು ಜಾಗವನ್ನು ರಸ್ತೆಗೆ ಬಿಟ್ಟು ಕಟ್ಟಡ ನಿರ್ಮಿಸುವಂತೆ ನೋಟಿಸ್ ನೀಡಲಾಗಿತ್ತು. ಕೆಲ ತಾಂತ್ರಿಕ ಹಾಗೂ ಕಾನೂನು ಸಮಸ್ಯೆಗಳಿಂದ ದಶಕಗಳು ಕಳೆದರೂ ರಸ್ತೆ ವಿಸ್ತರಣೆ ಕಾಮಗಾರಿಗೆ ಕಾಲ ಕೂಡಿ ಬಂದಿರಲಿಲ್ಲ.

ಈ ಅವಧಿಯಲ್ಲಿ ರಸ್ತೆ ವಿಸ್ತರಣೆ ಸಂಬಂಧ ಮೂರು ಬಾರಿ ನೋಟಿಸ್ ಪಡೆದಿದ್ದ ನಿವೇಶನದ ಮಾಲೀಕರು ಅತ್ತ ಕಟ್ಟಡ ನಿರ್ಮಿಸಲೂ ಆಗದೆ, ಮಾರಾಟ ಮಾಡಲೂ ಆಗದೆ ಪರಿತಪಿಸಿದ್ದರು.

ADVERTISEMENT

ಈ ನಡುವೆ, ಕೆಂಗೇರಿ ಉತ್ತರಹಳ್ಳಿ ವ್ಯಾಪ್ತಿಯ ಬಡಾವಣೆಗಳು ತೀವ್ರಗತಿಯಲ್ಲಿ ಅಭಿವೃದ್ಧಿಯಾದ ಹಿನ್ನೆಲೆಯಲ್ಲಿ ಇಲ್ಲಿನ ಜನಸಂಖ್ಯೆಯೂ ಹೆಚ್ಚಿತ್ತು. ಗಿರಿನಗರ, ಹೊಸಕೆರೆಹಳ್ಳಿ, ಹನುಮಂತನಗರ, ರಾಜರಾಜೇಶ್ವರಿನಗರ ಸೇರಿದಂತೆ ಇನ್ನಿತರೆ ಕಡೆಗೆ ತೆರಳುವ ಸಾರ್ವಜನಿಕರಿಗೆ ಈ ರಸ್ತೆ ಅತ್ಯಂತ ಅನುಕೂಲಕರವಾದ ಬದಲಿ ರಸ್ತೆಯಾಗಿ ಬದಲಾಗಿತ್ತು. ಇದರಿಂದ ವಾಹನ ದಟ್ಟಣೆ ಹೆಚ್ಚಿ ಸಂಜೆ ವೇಳೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಅತಿಯಾದ ವಾಹನ ಸಂದಣಿಯಿಂದ ರಸ್ತೆಯು ಹದಗೆಟ್ಟು ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿತ್ತು. ಶ್ರೀನಿವಾಸಪುರ ಬಳಿಯ ಆದಿತ್ಯ ಬೇಕರಿಯಿಂದ ಕೆಂಗೇರಿಯ ಕೃಷ್ಣಪ್ರಿಯಾ ಕಲ್ಯಾಣ ಮಂಟಪದವರೆಗೆ ನಿರ್ಮಾಣಗೊಳ್ಳಲಿರುವ ₹51ಕೋಟಿ ವೆಚ್ಚದ ರಸ್ತೆ ವಿಸ್ತರಣೆ ಕಾಮಗಾರಿಯಿಂದ ಈ ಎಲ್ಲ ಸಮಸ್ಯೆಗಳಿಗೆ ತೆರೆಬೀಳಲಿದೆ.

ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ‘ಯಶವಂತಪುರ ಕ್ಷೇತ್ರ ವ್ಯಾಪ್ತಿಯ 110 ಹಳ್ಳಿಗಳ ಅಭಿವೃದ್ಧಿಗೆ ₹200 ಕೋಟಿ ಅನುದಾನ ದೊರಕಿದೆ’ ಎಂದು ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಕೆಲ ಕಾರಣಗಳಿಂದ ರಸ್ತೆ ವಿಸ್ತರಣೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಕಾಮಗಾರಿಗೆ ಚಾಲನೆ ದೊರಕಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.