
ಕೆಂಗೇರಿ: ‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನೆಪದಲ್ಲಿ ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸುತ್ತಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ ಆರೋಪಿಸಿದರು.
ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯ ಮಾರಣ್ಣ ಬಡಾವಣೆಯಲ್ಲಿನ ನೀರಿನ ಸಮಸ್ಯೆಯಿಂದ ಬೇಸತ್ತ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಸರ್ಕಾರ ಹಾಗೂ ಜಲಮಂಡಳಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜವರಾಯಿಗೌಡ, ‘ನುಡಿದಂತೆ ನಡೆಯುವುದಾಗಿ ಬುರುಡೆ ಬಿಡುವ ರಾಜ್ಯ ಸರ್ಕಾರ, ಕುಡಿಯಲು ನೀರು ಕೂಡ ನೀಡುತ್ತಿಲ್ಲ. ಉಚಿತ ಯೋಜನೆಗಳಿಗೆ ಜನರಿಂದಲೇ ಹಣ ವಸೂಲಿ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಬಗೆಹರಿಸದಿದ್ದರೆ, ಜಲಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.
‘ಮಾರಣ್ಣ ಬಡಾವಣೆಯ ಪಂಪ್‌ಸೆಟ್ ಕೆಟ್ಟು ಆರು ತಿಂಗಳಾಗಿದೆ. ಎಲ್ಲಾ ನಿವಾಸಿಗಳು ಕಾವೇರಿ ನೀರು ಸಂಪರ್ಕ ಪಡೆಯಬೇಕೆಂದು ಜಲಮಂಡಳಿಯ ಕೊಳವೆಬಾವಿ ದುರಸ್ತಿ ಮಾಡುತ್ತಿಲ್ಲ. ಅತ್ತ ಕಾವೇರಿ ನೀರೂ ಬರುತ್ತಿಲ್ಲ. ಜನರ ಹಿತಾಸಕ್ತಿ ಮರೆತಿರುವ ಜಲಮಂಡಳಿ ಲಾಭದ ಆಸೆಗೆ ಬಿದ್ದಿದ್ದು, ನೀರಿಗೆ ಹಾಹಾಕಾರ ಎದುರಾಗಿದೆ’ ಎಂದು ಮಹಿಳೆಯರು ದೂರಿದರು.
‘ಕುಡಿಯಲು ನೀರಿಲ್ಲ. ಓಡಾಡಲು ಸರಿಯಾದ ರಸ್ತೆ ಇಲ್ಲ. ಸಾವಿರಾರು ತೆರಿಗೆ ವಸೂಲಿ ಮಾಡುವ ಪಾಲಿಕೆ ಹಾಗೂ ಜಲಮಂಡಳಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಸ್ಥಳೀಯ ಮಹಿಳೆ ತ್ರಿವೇಣಿ ದೂರಿದರು.
ಮುಖಂಡರಾದ ತಿಪ್ಪೇನಹಳ್ಳಿ ಮಂಜುನಾಥ್, ಟ್ರಾವೆಲ್ ಮಂಜುನಾಥ್, ಕುಮಾರ್, ಪುನೀತ್, ಮಾರೇಗೌಡ್ರು, ಸಂತೋಷ್, ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.