ADVERTISEMENT

ಖಾದರ್‌ ದೇಶದ್ರೋಹಿ: ರೇಣುಕಾಚಾರ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:52 IST
Last Updated 28 ಡಿಸೆಂಬರ್ 2019, 10:52 IST
ರೇಣುಕಾಚಾರ್ಯ
ರೇಣುಕಾಚಾರ್ಯ   

ಬೆಂಗಳೂರು: ‘ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್‌ ಒಬ್ಬ ಹುಚ್ಚ, ಪಾಗಲ್‌, ದೇಶದ್ರೋಹಿ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

‘ನನ್ನ ಬಗ್ಗೆ ಜೋಕರ್ ಎಂಬ ಅರ್ಥ ಬರುವಂತೆ ಮಾತನಾಡಿದ್ದಾನೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ ಹೇಳಿದರು.

‘ನಾನು ಹೋರಾಟ ಮಾಡಿ ಎಲ್ಲ ಜಾತಿ, ಧರ್ಮಗಳ ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ಆತ ಧರ್ಮದ ಆಧಾರದ ಮೇಲೆ ಗೆದ್ದು ಬಂದಿರುವುದು. ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮಂಗಳೂರು ಗಲಭೆಗೆ ಖಾದರ್‌ ಪ್ರಚೋದನೆಯೇ ಕಾರಣ’ ಎಂದರು.

ADVERTISEMENT

‘ಉಪಮುಖ್ಯಮತ್ರಿ ಹುದ್ದೆ ರದ್ದುಪಡಿಸಬೇಕು ಎಂಬ ನನ್ನ ಒತ್ತಾಯದ ಹಿಂದೆ ಯಡಿಯೂರಪ್ಪ ಇಲ್ಲ. ಅವರು ಹುಲಿ ಇದ್ದಂತೆ. ಅವರು ಏನು ಹೇಳಬೇಕೊ ಅದನ್ನು ನೇರವಾಗಿ ಹೇಳುತ್ತಾರೆ. ಅನ್ಯರ ಮೂಲಕ ಹೇಳಿಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶವಿಡಿ ಚರ್ಚೆ ನಡೆಯುತ್ತಿರುವಾಗ, ರಾಜಕೀಯದ ಬಗ್ಗೆ ಚರ್ಚೆ ನಡೆಸುವುದಿಲ್ಲ. ನಾನು ಈಗಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ’ ಎಂದೂ ರೇಣುಕಾಚಾರ್ಯ ಹೇಳಿದರು.

ನೇಪಾಳ, ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ 50 ಸಾವಿರ ಅಕ್ರಮ ವಲಸಿಗರು ರಾಜ್ಯದಲ್ಲಿ ಇದ್ದಾರೆ. ಇವರನ್ನು ಕೈಗಾರಿಕೆಗಳಲ್ಲಿ ಮತ್ತು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಕಡಿಮೆ ಕೂಲಿ ಎಂಬ ಕಾರಣಕ್ಕೆ, ಅಕ್ರಮ ವಲಸೆಗೆ ಉತ್ತೇಜಿಸಲಾಗುತ್ತಿದೆ. ಇಂತಹವರ ಮೇಲೆ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.