ADVERTISEMENT

ಕೆಎಚ್‌ಬಿ: ಡ್ಯುಪ್ಲೆಕ್ಸ್‌ ಮನೆಗಳ ನಿರ್ಮಾಣ

ಸೂರ್ಯನಗರ, ರಾಯಸಂದ್ರದಲ್ಲಿ ಬಡಾವಣೆ ಅಭಿವೃದ್ಧಿ

ಎ.ಎಂ.ಸುರೇಶ
Published 23 ಸೆಪ್ಟೆಂಬರ್ 2025, 0:25 IST
Last Updated 23 ಸೆಪ್ಟೆಂಬರ್ 2025, 0:25 IST
<div class="paragraphs"><p>ಡ್ಯುಪ್ಲೆಕ್ಸ್‌ ಮನೆಗಳ ನೀಲನಕ್ಷೆ</p></div>

ಡ್ಯುಪ್ಲೆಕ್ಸ್‌ ಮನೆಗಳ ನೀಲನಕ್ಷೆ

   
ಅಪಾರ್ಟ್‌ಮೆಂಟ್‌, ಡ್ಯುಪ್ಲೆಕ್ಸ್‌ಗಳಿಗೆ ಹೆಚ್ಚಿನ ಬೇಡಿಕೆ | ಸೂರ್ಯನಗರದಲ್ಲಿ 100 ಡ್ಯುಪ್ಲೆಕ್ಸ್‌ ಮನೆಗಳ ನಿರ್ಮಾಣಕ್ಕೆ ಪ್ರಸ್ತಾವ | ಸಂಪುಟ ಒಪ್ಪಿಗೆ ಬಳಿಕ ಸ್ಟೇಡಿಯಂ ಶಂಕುಸ್ಥಾಪನೆ

ಬೆಂಗಳೂರು: ಮಧ್ಯಮ ವರ್ಗದ ಜನರಿಂದ ಮನೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು ರಾಯಸಂದ್ರ ಮತ್ತು ಸೂರ್ಯನಗರದಲ್ಲಿ ಡ್ಯುಪ್ಲೆಕ್ಸ್‌ ಮನೆಗಳನ್ನು ನಿರ್ಮಿಸಲು ಕರ್ನಾಟಕ ಗೃಹ ಮಂಡಳಿ ಮುಂದಾಗಿದೆ.

ಕನಕಪುರ ತಾಲ್ಲೂಕು ರಾಯಸಂದ್ರ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಕುವೆಂಪು ಬಡಾವಣೆಯಲ್ಲಿ ಕಡಿಮೆ ಆದಾಯ ಗುಂಪು (ಎಲ್‌ಐಜಿ) ಮತ್ತು ಮಧ್ಯಮ ಆದಾಯ ಗುಂಪಿನವರಿಗೆ (ಎಂಐಜಿ) ಡ್ಯುಪ್ಲೆಕ್ಸ್‌ ಮನೆಗಳನ್ನು ನಿರ್ಮಿಸುವ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ.

ADVERTISEMENT

ಈಗಾಗಲೇ ಭೂಸ್ವಾಧೀನ ಕಾರ್ಯ ಪೂರ್ಣಗೊಂಡು, ಬಡಾವಣೆ ನಿರ್ಮಾಣವಾಗಿದೆ. ಸಾರ್ವಜನಿಕರಿಂದಲೂ ಮನೆಗಳಿಗೆ ಬೇಡಿಕೆ ಬಂದಿದ್ದು, ಒಂದೂವರೆಯಿಂದ ಎರಡು ವರ್ಷದ ಒಳಗೆ ಡ್ಯುಪ್ಲೆಕ್ಸ್‌ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗೃಹಮಂಡಳಿ, ಬಿಡಿಎ ನಿರ್ಮಿಸುವ ಮನೆಗಳ ಬಗ್ಗೆ ಜನರಲ್ಲಿ ಇರುವ ನಕಾರಾತ್ಮಕ ಭಾವನೆ ಹೋಗಬೇಕು, ಖಾಸಗಿಯವರಿಗೆ ಪೈಪೋಟಿ ನೀಡಬೇಕು ಎಂಬ ಉದ್ದೇಶದಿಂದ ಎಲ್ಲ ರೀತಿಯ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಎಲ್‌ಐಜಿ ಗುಂಪಿನ ನಿವೇಶನದ ವಿಸ್ತೀರ್ಣ 30X40. ಈ ಜಾಗದಲ್ಲಿ 3ಬಿಎಚ್‌ಕೆ ಮನೆಗಳನ್ನು
ನಿರ್ಮಿಸಲಾಗುತ್ತದೆ. ಇದರ ಮೌಲ್ಯ ₹80 ಲಕ್ಷ. ಎಂಐಜಿ ಗುಂಪಿನ ವಿಸ್ತೀರ್ಣ 30X50. ಈ ಜಾಗದಲ್ಲಿ 3 ಬಿಎಚ್‌ಕೆ ಮನೆಗಳನ್ನು ನಿರ್ಮಿಸಲಾಗುತ್ತದೆ. ಇದರ ಮೌಲ್ಯ ₹95 ಲಕ್ಷ. ಎರಡೂ ಗುಂಪಿನವರಿಗೆ 3 ಬಿಎಚ್‌ಕೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ. ಆದರೆ, ವಿಸ್ತೀರ್ಣ ಮತ್ತು ಮೌಲ್ಯದಲ್ಲಿ
ವ್ಯತ್ಯಾಸವಿರುತ್ತದೆ.

ಸೂರ್ಯನಗರ:

ಸೂರ್ಯನಗರದಲ್ಲೂ ಇದೇ ರೀತಿ ಡ್ಯುಪ್ಲೆಕ್ಸ್‌ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಬೇಡಿಕೆ ಸಮೀಕ್ಷೆಗೆ ಸದ್ಯದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಆ ಬಳಿಕ ನಿರ್ಮಾಣ ಕಾರ್ಯ ಶುರುವಾಗಲಿದೆ. ಅಲ್ಲಿ ಗೃಹಮಂಡಳಿಗೆ ಸೇರಿದ ಸಾಕಷ್ಟು ಜಾಗ ಲಭ್ಯವಿದೆ ಎಂದು ತಿಳಿಸಿದರು.

ಸದ್ಯದಲ್ಲೇ ಸಂಪುಟ ಒಪ್ಪಿಗೆ

ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಟೇಡಿಯಂ ನಿರ್ಮಾಣಕ್ಕೆ ಗೃಹ ಮಂಡಳಿಯು ವಸತಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, 15 ದಿನಗಳಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡುವ ನಿರೀಕ್ಷೆ ಇದೆ. 

ಸಂಪುಟದ ಒಪ್ಪಿಗೆ ದೊರೆತ ನಂತರ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ನಿರ್ಮಾಣದ ಹೊಣೆಯನ್ನು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗೆ ನೀಡಿ, 2–3 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ರೈತರ ಪಾಲಿನ ನಿವೇಶನ ಹಂಚಿಕೆ 25ಕ್ಕೆ

ಸೂರ್ಯನಗರ ನಾಲ್ಕನೇ ಹಂತದಲ್ಲಿ ರೈತರ ಪಾಲಿನ ಶೇ 50ರಷ್ಟು ನಿವೇಶನಗಳನ್ನು ಈ ತಿಂಗಳ 25ರಂದು ಹಂಚಿಕೆ ಮಾಡಲಾಗುತ್ತದೆ. ಇನ್ನುಳಿದ ಶೇ 50 ರಷ್ಟು ನಿವೇಶನಗಳನ್ನು ನಾಗರಿಕರಿಗೆ ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ. 

1200 ಎಕರೆ ಪ್ರದೇಶದಲ್ಲಿ ಬಡಾವಣೆ ಅಭಿವೃದ್ಧಿಪಡಿಸಿದ್ದು ನಾಗರಿಕರಿಗೆ ಸುಮಾರು ನಾಲ್ಕು ಸಾವಿರ ನಿವೇಶನಗಳು ಲಭ್ಯವಾಗಲಿವೆ. ಇವುಗಳ ಹಂಚಿಕೆ ಹಾಗೂ ಅಂತರರಾಷ್ಟ್ರೀಯ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಒಟ್ಟಿಗೆ ಮಾಡಲು ಮಂಡಳಿಯು ಉದ್ದೇಶಿಸಿದೆ.

ನಾಲ್ಕನೇ ಹಂತದಲ್ಲಿ ನಿವೇಶನ ಕೋರಿ 17 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸದ್ಯಕ್ಕೆ ನಾಲ್ಕು ಸಾವಿರ ನಿವೇಶನಗಳು ಲಭ್ಯವಿದ್ದು ಚದರ ಅಡಿಗೆ ₹2,200 ದರ ನಿಗದಿಪಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.