ADVERTISEMENT

ನಿರ್ದೇಶಕನ ಅಪಹರಿಸಿ ₹1.70 ಕೋಟಿ ಸುಲಿಗೆ: ಪಿಎಸ್ಐ, ಕಾನ್‌ಸ್ಟೆಬಲ್ ಬಂಧನ

* ಕ್ರಿಪ್ಟೊ ಕರೆನ್ಸಿ ವಿನಿಮಯ ಮಾಡಿಕೊಡುತ್ತಿದ್ದ ಸ್ನೇಹಿತನಿಂದ ಸಂಚು * ನಿರೀಕ್ಷಣಾ ಜಾಮೀನು ಪಡೆದಿದ್ದ ಪ್ರಮುಖ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 0:26 IST
Last Updated 21 ನವೆಂಬರ್ 2023, 0:26 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ವಿದೇಶಿ ಕಂಪನಿಯೊಂದರ ನಿರ್ದೇಶಕರನ್ನು ಅಪಹರಿಸಿ ₹ 1.70 ಕೋಟಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಪ್ರೊಬೇಷನರಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹಾಗೂ ಕಾನ್‌ಸ್ಟೆಬಲ್ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಮಡಿವಾಳ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರೊಬೇಷನರಿ ಪಿಎಸ್‌ಐ ಸಿದ್ಧಾರೂಢ ಬಿಜ್ಜಣ್ಣನವರ, ಕಾನ್‌ಸ್ಟೆಬಲ್ ಅಲ್ಲಾಭಕ್ಷ್ ಕರ್ಜಗಿ, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ರಾಜ್ ಕಿಶೋರ್ ಹಾಗೂ ಬೂತಪಲ್ಲಿ ನಿವಾಸಿ ದಿನೇಶ್ ಬಂಧಿತರು.

‘ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯೊಂದರ ನಿರ್ದೇಶಕ ವಿ.ಎಸ್. ಕಾರ್ತಿಕ್ ಅವರನ್ನು ಜುಲೈ 25ರಂದು ಅಪಹರಣ ಮಾಡಲಾಗಿತ್ತು. ಅವರನ್ನು ಬೆದರಿಸಿ, 1.80 ಲಕ್ಷ ಯುಎಸ್‌ಡಿಟಿ ಕ್ರಿಪ್ಟೊ ಕರೆನ್ಸಿ (ಭಾರತದಲ್ಲಿ ₹ 1.50 ಕೋಟಿ) ಹಾಗೂ ₹ 20 ಲಕ್ಷ ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಕೃತ್ಯದ ಸಂಬಂಧ ಕಾರ್ತಿಕ್ ಅವರು ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆಗೆ ದೂರು ನೀಡಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಪ್ರಕರಣದ ಪ್ರಮುಖ ಆರೋಪಿಗಳಾದ ವಂಶಿಕೃಷ್ಣ, ವಿನೋದ್ ನಾಯ್ಕ್ ಹಾಗೂ ಕಿರಣ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಪ್ರಕರಣದ ತನಿಖೆ ಮುಂದುವರಿಸಿದ್ದ ಪೊಲೀಸರು, ಪ್ರಮುಖ ಆರೋಪಿಗಳಿಗೆ ಪಿಎಸ್‌ಐ ಹಾಗೂ ಇತರರು ಸಹಕಾರ ನೀಡಿದ್ದನ್ನು ಪತ್ತೆ ಮಾಡಿದ್ದರು. ನಂತರ, ಪ್ರಕರಣದ ತನಿಖೆಯನ್ನು ಕಮಿಷನರ್ ಅವರು ಸಿಸಿಬಿಗೆ ವರ್ಗಾಯಿಸಿದ್ದರು. ಕಾರ್ಯಾಚರಣೆ ನಡೆಸಿ ಪಿಎಸ್‌ಐ, ಕಾನ್‌ಸ್ಟೆಬಲ್ ಹಾಗೂ ಇತರರನ್ನು ಇದೀಗ ಬಂಧಿಸಲಾಗಿದೆ’ ಎಂದು ತಿಳಿಸಿದರು.

ಕರೆನ್ಸಿ ವಿನಿಮಯಕ್ಕೆ ಸಹಾಯ ಮಾಡುತ್ತಿದ್ದ: ‘ದೂರುದಾರ ಕಾರ್ತಿಕ್ ಅವರಿಗೆ ಪ್ರತಿ ತಿಂಗಳು ಯುಎಸ್‌ಡಿಟಿ ಕರೆನ್ಸಿಯಲ್ಲಿ ವೇತನ ಬರುತ್ತಿತ್ತು. ಅದನ್ನು ರೂಪಾಯಿಗೆ ವಿನಿಮಯ ಮಾಡಿಸಿಕೊಳ್ಳಲು ಕಾರ್ತಿಕ್ ಅವರು ಸ್ನೇಹಿತ ವಂಶಿಕೃಷ್ಣ ಸಹಾಯ ಪಡೆಯುತ್ತಿದ್ದರು. ಆತ, ಕಮಿಷನ್ ಆಧಾರದಲ್ಲಿ ಕರೆನ್ಸಿ ವಿನಿಮಯ ಮಾಡಿಕೊಡುತ್ತಿದ್ದ’ ಎಂದು ಸಿಸಿಬಿ ಪೊಲಿಸರು ಹೇಳಿದರು.

‘ಕಾರ್ತಿಕ್ ಬಳಿ ಹಣವಿರುವುದು ಗೊತ್ತಿದ್ದರಿಂದ ಅಪಹರಣ ಮಾಡಿ ಸುಲಿಗೆ ಮಾಡಲು ವಂಶಿಕೃಷ್ಣ ಸಂಚು ರೂಪಿಸಿದ್ದ. ಅದಕ್ಕಾಗಿ ವಿನೋದ್ ನಾಯ್ಕ್ ಹಾಗೂ ಕಿರಣ್ ಸಹಕಾರ ಪಡೆದಿದ್ದ. ಮೂವರು ಸೇರಿಕೊಂಡು ಕಾರ್ತಿಕ್ ಅವರನ್ನು ಅಪಹರಣ ಮಾಡಿ ಬೆದರಿಸಿ ಸುಲಿಗೆ ಮಾಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.