ADVERTISEMENT

ರೋಗಿಗಳು ವ್ಯರ್ಥ ಮಾಡಿದ ಆಹಾರವೂ ಸದ್ಬಳಕೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಬಯೋಗ್ಯಾಸ್ ಘಟಕ ಸ್ಥಾಪನೆ *ನಿತ್ಯ ಒಂದು ಟನ್‌ಗೂ ಅಧಿಕ ಆಹಾರ ತ್ಯಾಜ್ಯ ಉತ್ಪಾದನೆ

ವರುಣ ಹೆಗಡೆ
Published 26 ಜನವರಿ 2020, 19:45 IST
Last Updated 26 ಜನವರಿ 2020, 19:45 IST
ರೋಗಿಗಳಿಗೆ ಸಂಸ್ಥೆಯಲ್ಲಿ ಹಾಲು ವಿತರಿಸುತ್ತಿರುವುದು  – ಪ್ರಜಾವಾಣಿ ಚಿತ್ರ
ರೋಗಿಗಳಿಗೆ ಸಂಸ್ಥೆಯಲ್ಲಿ ಹಾಲು ವಿತರಿಸುತ್ತಿರುವುದು  – ಪ್ರಜಾವಾಣಿ ಚಿತ್ರ   

ರೋಗಿಗಳು ವ್ಯರ್ಥ ಮಾಡಿದ ಆಹಾರ ತ್ಯಾಜ್ಯದಿಂದಲೇ ಬಯೋಗ್ಯಾಸ್ ಉತ್ಪಾದಿಸಿ, ಅಡುಗೆಗೆ ಬಳಸಿಕೊಳ್ಳಲುಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮುಂದಾಗಿದೆ.

ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಗಂಟಲು, ಸ್ತನ,ಶ್ವಾಸಕೋಶ ಸೇರಿದಂತೆ ವಿವಿಧ ಪ್ರಕಾರದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ, ಹೊರ ರೋಗಿಗಳಾಗಿ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಸಂಸ್ಥೆಯಲ್ಲಿನಧರ್ಮಶಾಲೆಯಲ್ಲಿಮೂರು ಹೊತ್ತು ಸಾವಿರ ಮಂದಿಗೆ ಊಟ–ತಿಂಡಿಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ.

ಇನ್ನೊಂದೆಡೆಸತ್ಯಸಾಯಿ ಸೇವಾ ಟ್ರಸ್ಟ್ ಸಹ ಮೊಬೈಲ್‌ ಕ್ಯಾಂಟೀನ್ ಮೂಲಕ ಪ್ರತಿನಿತ್ಯ ಮಧ್ಯಾಹ್ನ 1,200ಕ್ಕೂ ಅಧಿಕ ಮಂದಿಗೆ ಉಚಿತವಾಗಿ ಊಟ ನೀಡುತ್ತಿದೆ. ಒಳರೋಗಿಗಳಿಗೆ ಸಂಸ್ಥೆಯ ಅಡುಗೆ ಮನೆ ಮೂಲಕವೇ ಅಗತ್ಯ ಆಹಾರ ಒದಗಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ನಿತ್ಯ ಒಂದು ಟನ್‌ಗೂ ಅಧಿಕ ಆಹಾರ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.

ADVERTISEMENT

ಸಂಸ್ಥೆಯಲ್ಲಿನ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಗಳಿಗೆಕ್ಯಾಂಟೀನ್‌ನಲ್ಲಿ ರಿಯಾಯಿತಿ ದರದಲ್ಲಿ ಊಟ–ತಿಂಡಿ ದೊರೆಯಲಿದೆ. ಬಿಬಿಎಂಪಿ ವತಿಯಿಂದ ಇಂದಿರಾ ಕ್ಯಾಂಟೀನ್ ಕೂಡಾ ತೆರೆಯಲಾಗಿದೆ. ಹೀಗಾಗಿ ಪ್ರತಿನಿತ್ಯ ಆಸ್ಪತ್ರೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಊಟ–ತಿಂಡಿ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಆಹಾರ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇದಕ್ಕೆ ಪರಿಹಾರ ಎಂಬಂತೆ ಸಂಸ್ಥೆಯು ಬಯೋಗ್ಯಾಸ್‌ ಘಟಕ ನಿರ್ಮಿಸಲು ಮುಂದಾಗಿದ್ದು, ಅಡುಗೆ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಹಾಗೂ ರೋಗಿಗಳು ಎಸೆಯುವ ಆಹಾರ ತ್ಯಾಜ್ಯಕ್ಕೆ ಬಯೋಗ್ಯಾಸ್ ರೂಪ ನೀಡಲು ಸಿದ್ಧತೆ ಆರಂಭಿಸಿದೆ.

ಗಿಡಗಳಿಗೆ ಬಳಕೆ: ಸಂಸ್ಥೆಯು ತನ್ನ ಅಡುಗೆ ಮನೆಗೆ ಬಳಸಿಕೊಳ್ಳುತ್ತಿರುವಅಡುಗೆ ಅನಿಲದ(ಎಲ್‌ಪಿಜಿ) ಸಿಲಿಂಡರ್‌ಗಳಿಗೆಕಡಿವಾಣ ಹಾಕಿ, ಆಹಾರ ತ್ಯಾಜ್ಯದಿಂದಉತ್ಪಾದನೆಯಾಗುವ ಬಯೋಗ್ಯಾಸ್‌ ಅನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

‘ಬಯೋಗ್ಯಾಸ್‌ನಿಂದ ಆಹಾರ ತ್ಯಾಜ್ಯದ ಸಮಸ್ಯೆಗೂ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಯೋಗ್ಯಾಸ್ ಉತ್ಪಾದನೆಯಾದಲ್ಲಿ ಮಾರಾಟ ಮಾಡುವ ಚಿಂತನೆ ಕೂಡ ಇದೆ. ಗ್ಯಾಸ್ ಉತ್ಪಾದನೆ ನಂತರ ಉಳಿಯುವ ದ್ರವರೂಪದ ಜೈವಿಕ ತ್ಯಾಜ್ಯದಿಂದ ಗೊಬ್ಬರ ತಯಾರಿಸಬಹುದು. ಆ ಗೊಬ್ಬರವನ್ನು ಗಿಡಗಳಿಗೆ ಬಳಕೆ ಮಾಡಬಹುದಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ಫೊಸಿಸ್‌ ಪ್ರತಿಷ್ಠಾನ 6 ಮಹಡಿಯ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದು, ಶ್ರೀಘ್ರ ದಲ್ಲಿಉದ್ಘಾಟನೆಯಾಗಲಿದೆ. ಈ ಕಟ್ಟಡದಲ್ಲಿ ರೋಗಿಗಳಿಗೆ ಹಾಗೂ ಸಿಬ್ಬಂದಿಗೆ ಐದನೇ ಮಹಡಿಯಲ್ಲಿ ಪ್ರತ್ಯೇಕ ಕ್ಯಾಂಟೀನ್ ನಿರ್ಮಿಸಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಆಹಾರ ತ್ಯಾಜ್ಯ ಪ್ರಮಾಣ ಹೆಚ್ಚಾದರೂ ಬಯೋಗ್ಯಾಸ್‌ಗೆ ನೆರವಾಗಲಿದೆ’ ಎಂದರು.

ಆಹಾರವನ್ನು ಅನಗತ್ಯವಾಗಿ ವ್ಯರ್ಥ ಮಾಡಬಾರದು. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟಾಗಿಯೂ ಕೆಲವರು ಆಹಾರವನ್ನು ವ್ಯರ್ಥ ಮಾಡುತ್ತಿದ್ದಾರೆ. ಬಯೋಗ್ಯಾಸ್‌ನಿಂದ ಆಹಾರ ತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ.
–ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.