ADVERTISEMENT

ಕಿದ್ವಾಯಿ ಸಂಸ್ಥೆ: ಎಂಆರ್‌ಐ ಸ್ಕ್ಯಾನಿಂಗ್‌ಗೆ ಹೊಸ ಯಂತ್ರ

ಯಂತ್ರ ಖರೀದಿಸಲು ರಾಜ್ಯ ಸರ್ಕಾರ ಅನುಮೋದನೆ *ರೋಗಿಗಳಿಗೆ ವೇಗದ ಚಿಕಿತ್ಸೆಗೆ ಸಹಕಾರಿ

ವರುಣ ಹೆಗಡೆ
Published 24 ಆಗಸ್ಟ್ 2025, 22:43 IST
Last Updated 24 ಆಗಸ್ಟ್ 2025, 22:43 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ 
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ    

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವು ಆಗಾಗ ಕೈಕೊಡುತ್ತಿರುವ ಕಾರಣ, ಸಂಸ್ಥೆಯು ಹೊಸ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಖರೀದಿಸಲು ಮುಂದಾಗಿದೆ. 

ಹೊಸ ಯಂತ್ರ ಖರೀದಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮೂರು ತಿಂಗಳಲ್ಲಿ ಯಂತ್ರ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನಿರ್ಧರಿಸಲು, ಅನುಮಾನಾಸ್ಪದ ಗಡ್ಡೆ ಪತ್ತೆ ಹಚ್ಚಲು ಎಂಆರ್‌ಐ ಸ್ಕ್ಯಾನಿಂಗ್ ಸಹಕಾರಿ. ಸದ್ಯ ಕಾರ್ಯನಿರ್ವಹಿಸುತ್ತಿರುವ ಯಂತ್ರವು ಹಳೆಯದಾಗಿದೆ. ಹೊಸ ಯಂತ್ರ ಸಂಸ್ಥೆಗೆ ಸೇರ್ಪಡೆಯಾಗುವುದರಿಂದ ಕ್ಯಾನ್ಸರ್ ಚಿಕಿತ್ಸೆ ಕಾರ್ಯಕ್ಕೂ ವೇಗ ದೊರೆಯಲಿದೆ. 

ಸಂಸ್ಥೆಯು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರದಲ್ಲಿ ಕಳೆದ ವರ್ಷ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದ ಪರಿಣಾಮ, ರೋಗಿಗಳು ಸಮಸ್ಯೆ ಎದುರಿಸಿದ್ದರು. ಸ್ಕ್ಯಾನಿಂಗ್  ಮಾಡಿಸಿಕೊಳ್ಳಲು ವಿಕ್ಟೋರಿಯಾ ಸೇರಿ ಕೆಲ ಆಸ್ಪತ್ರೆಗಳಿಗೆ ರೋಗಿಗಳು ಅಲೆದಾಟ ನಡೆಸಿದ್ದರು. ಆ ವೇಳೆ ಸಹ ಹೊಸ ಯಂತ್ರ ಖರೀದಿಗೆ ಸಂಸ್ಥೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. 

ADVERTISEMENT

25 ಎಂಆರ್‌ಐ ಸ್ಕ್ಯಾನಿಂಗ್: ಜುಲೈ ತಿಂಗಳು ಸಹ ಹಳೆಯ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಯಂತ್ರದ ದುರಸ್ತಿಯ ಅವಧಿಯಲ್ಲಿ ರೋಗಿಗಳಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ, ಎಂಆರ್‌ಐ ಸ್ಕ್ಯಾನಿಂಗ್‌ಗೆ ಸಂಬಂಧಿಸಿದಂತೆ ಸಂಸ್ಥೆಯು ನಿಮ್ಹಾನ್ಸ್ ಮತ್ತು ಸಂಜಯ್‌ ಗಾಂಧಿ ಆಸ್ಪತ್ರೆ ಜತೆಗೆ ಒಡಂಬಡಿಕೆ ಮಾಡಿಕೊಂಡಿತ್ತು. ರೋಗಿಗಳಿಗೆ ಅಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಸಂಸ್ಥೆಯಿಂದಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಯಂತ್ರವನ್ನು ದುರಸ್ತಿ ಮಾಡಿ, ಎಂಆರ್‌ಐ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಸದ್ಯ ಸಂಸ್ಥೆಯಲ್ಲಿ ಪ್ರತಿ ನಿತ್ಯ ಸರಾಸರಿ 25 ಎಂಆರ್‌ಐ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ. ಹೊಸ ಯಂತ್ರ ಸೇರ್ಪಡೆಯ ಬಳಿಕ ಈ ಸಂಖ್ಯೆ 50ರ ಗಡಿ ದಾಟಲಿದೆ. 

‘ಸಂಸ್ಥೆಗೆ ಭೇಟಿ ನೀಡುವ ಹೊರ ಹಾಗೂ ಒಳ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ರೋಗಿಗಳು ಭೇಟಿ ನೀಡುತ್ತಿದ್ದಾರೆ. ತಪಾಸಣೆ ಹಾಗೂ ರೋಗದ ಬಗ್ಗೆ ಹೆಚ್ಚಿದ ಅರಿವಿನಿಂದಾಗಿ ಕ್ಯಾನ್ಸರ್ ಹೊಸ ಪ್ರಕರಣಗಳೂ ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ಹೊಸ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಸೇರ್ಪಡೆಯಿಂದ ರೋಗಿಗಳ ನಿರ್ವಹಣೆ ಸುಲಭ ಸಾಧ್ಯವಾಗುತ್ತದೆ’ ಎಂದು ಸಂಸ್ಥೆಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದರು. 

ರೋಗಿಗಳಿಗೆ ಸಮಸ್ಯೆಯಾಗದಂತೆ ಸದ್ಯ ಎಂಆರ್‌ಐ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ. ಹೊಸ ಯಂತ್ರ ಖರೀದಿಯ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ
ಡಾ.ಟಿ. ನವೀನ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

4.07 ಲಕ್ಷ ಒಪಿಡಿ ಭೇಟಿ

ಕಿದ್ವಾಯಿ ಸಂಸ್ಥೆಯ ಹೊರರೋಗಿ ವಿಭಾಗಕ್ಕೆ (ಒಪಿಡಿ) 2024ರಲ್ಲಿ ಕ್ಯಾನ್ಸರ್ ಪರೀಕ್ಷೆ ಹಾಗೂ ಚಿಕಿತ್ಸೆ ಸಂಬಂಧ 4.07 ಲಕ್ಷ ಮಂದಿ ಭೇಟಿ ನೀಡಿದ್ದರು. 22063 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದರೆ ಸಂಸ್ಥೆ ನಡೆಸಿದ ತಪಾಸಣೆಯಿಂದ 21881 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಚಿಕಿತ್ಸೆಗಾಗಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಏರುಗತಿ ಪಡೆದಿದೆ. ಪ್ರತಿ ತಿಂಗಳು ಸರಾಸರಿ 33946 ಮಂದಿ ಹೊರ ರೋಗಿಗಳಾಗಿ ಭೇಟಿ ನೀಡಿದರೆ 1839 ಮಂದಿ ಒಳ ರೋಗಿಗಳಾಗಿ ದಾಖಲಾಗುತ್ತಿದ್ದಾರೆ. 2020ರಲ್ಲಿ ಈ ಸಂಖ್ಯೆ ಕ್ರಮವಾಗಿ 21483 ಹಾಗೂ 795ರಷ್ಟಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.