ADVERTISEMENT

‘ನೀರಿನ ಸಮಸ್ಯೆ ಗೆಹರಿಸಿ, ಇಲ್ಲ ಶಿಕ್ಷೆ ಎದುರಿಸಿ-ಕೆ.ಜೆ.ಜಾರ್ಜ್

ಜಲಮಂಡಳಿ ಅಧಿಕಾರಿಗಳಿಗೆ ಸಚಿವ ಜಾರ್ಜ್‌ ಎಚ್ಚರಿಕೆ, ಜನರಿಂದ ಅಹವಾಲುಗಳ ಆಲಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 23:58 IST
Last Updated 19 ಫೆಬ್ರುವರಿ 2026, 23:58 IST
ಕೆ.ಜೆ.ಜಾರ್ಜ್‌
ಕೆ.ಜೆ.ಜಾರ್ಜ್‌   

ಬೆಂಗಳೂರು: ‘ಪಿಳ್ಳಣ್ಣ ಗಾರ್ಡನ್‌ ಸಹಿತ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಸಬೂಬು ಹೇಳದೇ ಶುದ್ದ ಕುಡಿಯುವ ನೀರಿನ ಸಂಪರ್ಕ ಯಾವಾಗ ನೀಡುತ್ತೀರಿ ಎನ್ನುವುದನ್ನು ದಿನಾಂಕ ಸಹಿತ ಹೇಳಿ, ಇಲ್ಲದೇ ಇದ್ದರೆ ಕಠಿಣ ಕ್ರಮ ಎದುರಿಸಿ..’

ಸರ್ವಜ್ಞನಗರ ಕ್ಷೇತ್ರ ವ್ಯಾಪ್ತಿಯಲ್ಲಿ ದೂರುಗಳ ಬಂದ ಕಾರಣ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ಸಚಿವ ಕೆ.ಜೆ.ಜಾರ್ಜ್‌ ಅವರು ತರಾಟೆಗೆ ತೆಗೆದುಕೊಂಡ ಪರಿ ಇದು.

ಕೆ.ಜಿ. ಹಳ್ಳಿ ವ್ಯಾಪ್ತಿಯಲ್ಲಿ ಸಂಚರಿಸಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ಸಚಿವರು, ‘ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರು ಕೇಳಿದ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಬೇಡಿ’ ಎಂದು ಸೂಚನೆ ನೀಡಿದರು.

ADVERTISEMENT

‘ಕ್ಷೇತ್ರ ಪರ್ಯಟನೆ ಮಾಹಿತಿ ನೀಡಿದರೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಹಾಜರಾಗಿಲ್ಲ. ಮುಂದೆ ಈ ರೀತಿ ಮಾಡಿದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮೆಟ್ರೊ ಕಾಮಗಾರಿ ಮುಗಿಸಿ: ‘ ಹಿಂದೆ ನಗರಾಭಿವೃದ್ದಿ ಸಚಿವನಾಗಿದ್ದಾಗ 6 ಎಕರೆ ಜಾಗ ನೀಡಿದ್ದು, ಇಲ್ಲಿ ಸುಸಜ್ಜಿತ ಮೆಟ್ರೊ ನಿಲ್ದಾಣ ನಿರ್ಮಾಣವಾಗಬೇಕು. ವೆಂಕಟೇಶಪುರ ಬಳಿ ಹಾಗೂ ನಾಗವಾರ ಮೆಟ್ರೊ ನಿಲ್ದಾಣಗಳ ಬಳಿ ನಡೆಯುತ್ತಿರುವ ರಸ್ತೆ, ಮಳೆ ನೀರು ಹಾಗೂ ಒಳಚರಂಡಿ ಕಾಮಗಾರಿಗಳನ್ನು ವೇಗವಾಗಿ ಮುಗಿಸಬೇಕು’ ಎಂದು ಜಾರ್ಜ್‌ ಸೂಚನೆ ನೀಡಿದರು.

ಅಹವಾಲು ಆಲಿಕೆ: ಪಿಳ್ಳಣ್ಣ ಗಾರ್ಡನ್‌ನ ಐದು ಬ್ಲಾಕ್‌ಗಳಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಮನೆಗಳ ನವೀಕರಣ ಹಾಗೂ ಶುದ್ದ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದರು. ವಿನೋಬಾ ನಗರ, ಭಾರತ್ ಮಾತಾ ಬಡಾವಣೆಯಲ್ಲೂ ಸ್ಥಳೀಯರು ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿದರು.

ಕೆ.ಜಿ. ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರ ಮುನಿರಾಜು, ಹೆಣ್ಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್‌.ಎ. ಪುಲಿಕೇಶಿ ಹಾಗೂ ಅಮರ್‌ನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.