ಬೆಂಗಳೂರು: ಗಣಿಗಾರಿಕೆಯಿಂದ ಬಾಧಿತವಾಗಿರುವ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಸಿದ್ದು ಮತ್ತು ಶಂಕರ ತಳಿಯ ಚಂದ್ರಹಲಸು ಬೆಳೆಯುವ ರೈತರಿಗೆ ಉತ್ತೇಜನ ನೀಡಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಮುಂದಾಗಿದೆ. ಇದಕ್ಕಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ನೆರವಿನಲ್ಲಿ ಯೋಜನೆಯ ರೂಪುರೇಷೆ ಸಿದ್ಧವಾಗುತ್ತಿದೆ.
ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಗಣಿ ಬಾಧಿತ ಗ್ರಾಮಗಳ ರೈತರಿಗೆ ಚಂದ್ರಹಲಸಿನ ವಿಶೇಷ ತಳಿಯ ಸಸಿಗಳ ವಿತರಣೆ, ತಾಂತ್ರಿಕ ಮತ್ತು ಆರ್ಥಿಕ ನೆರವು, ಹಣ್ಣುಗಳ ಸಂಸ್ಕರಣೆ ಹಾಗೂ ಸಂರಕ್ಷಣೆ, ಮಾರುಕಟ್ಟೆ ಒದಗಿಸುವುದು, ವಿದೇಶಗಳಿಗೆ ರಫ್ತಿನವರೆಗೂ ವಿವಿಧ ಹಂತಗಳಲ್ಲಿ ನೆರವಾಗುವ ವಿಸ್ತೃತ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರುವ ಪ್ರಸ್ತಾವ ಕೆಎಂಇಆರ್‌ಸಿ ಮುಂದಿದೆ.
ನಿಗಮದ ಮೇಲುಸ್ತುವಾರಿ ಪ್ರಾಧಿಕಾರಿಯಾಗಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ, ಅವರ ಸಲಹೆಗಾರರಾಗಿರುವ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್, ನಿಗಮದ ಅಧ್ಯಕ್ಷೆ ಉಮಾ ಮಹದೇವನ್, ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ನೇತೃತ್ವದ ತಂಡವು ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಐಐಎಚ್‌ಆರ್ ಮತ್ತು ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳೊಂದಿಗೆ ಫೆಬ್ರುವರಿಯಲ್ಲಿ ಮೊದಲ ಸುತ್ತಿನ ಚರ್ಚೆ ನಡೆಸಿದೆ.
ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸುವ ಹೊಣೆಯನ್ನು ಹೆಸರಘಟ್ಟದ ಐಐಎಚ್‌ಆರ್‌ನಲ್ಲಿ ಹಲಸು ಬೆಳೆ ಕುರಿತು ಸಂಶೋಧನೆ ನಡೆಸುತ್ತಿರುವ ತೋಟಗಾರಿಕಾ ವಿಜ್ಞಾನಿ ಕರುಣಾಕರನ್ ಅವರಿಗೆ ವಹಿಸಲಾಗಿದೆ. ಮೇ ಅಂತ್ಯದ ವೇಳೆಗೆ ಯೋಜನೆಯ ಕರಡನ್ನು ಅನುಮೋದಿಸಿ, ಅನುಷ್ಠಾನಕ್ಕೆ ಚಾಲನೆ ನೀಡುವ ಗುರಿಯನ್ನು ನಿಗಮ ಹೊಂದಿದೆ.
ಹತ್ತು ಸಾವಿರ ರೈತರಿಗೆ ನೆರವು: ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಎಂಇಆರ್‌ಸಿ ಮೇಲುಸ್ತುವಾರಿ ಪ್ರಾಧಿಕಾರಿಯವರ ಸಲಹೆಗಾರ ವಿ. ಬಾಲಸುಬ್ರಮಣಿಯನ್, ‘ತುಮಕೂರು ಜಿಲ್ಲೆಯ ವಿವಿಧೆಡೆ ಸಿದ್ದು ಮತ್ತು ಶಂಕರ ತಳಿಯ ಹಲಸನ್ನು ಬೆಳೆಯಲಾಗುತ್ತಿದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಹವಾಮಾನದಲ್ಲಿ ಸಾಮ್ಯತೆ ಇದೆ. ಮೊದಲು ಈ ಎರಡು ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಎರಡನೇ ಹಂತದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.
ಯೋಜನೆಯಡಿ ಹತ್ತು ಸಾವಿರ ರೈತರಿಗೆ ಸಿದ್ದು ಮತ್ತು ಶಂಕರ ತಳಿಯ ಹಲಸಿನ ಸಸಿಗಳನ್ನು ವಿತರಿಸುವ ಪ್ರಸ್ತಾವವಿದೆ. ಐಐಎಚ್‌ಆರ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ತೋಟಗಾರಿಕಾ ನರ್ಸರಿ ಇದ್ದು, ವಾರ್ಷಿಕ ಒಂದು ಲಕ್ಷ ಸಸಿಗಳ ಉತ್ಪಾದನಾ ಸಾಮರ್ಥ್ಯವಿದೆ. ಅದರಿಂದಲೇ ಸಸಿಗಳನ್ನು ಪಡೆದು ಒದಗಿಸುವ ಪ್ರಸ್ತಾವ ನಿಗಮದ ಮುಂದಿದೆ.
ಮುಖ್ಯಾಂಶಗಳು...
* ತುಮಕೂರು, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ವ್ಯಾಪ್ತಿ
* ಚಂದ್ರಹಲಸು ಸಸಿಗಳನ್ನು ಒದಗಿಸಲು ಐಐಎಚ್‌ಆರ್ ಒಲವು
* ಸಸಿ ಪೂರೈಕೆಯಿಂದ ರಫ್ತಿನವರೆಗೆ ನೆರವಾಗಲು ಸಮಗ್ರ ಯೋಜನೆ
ಹಣದ ಕೊರತೆ ಇಲ್ಲ’
‘ಹಲಸು ಬೆಳೆ ಉತ್ತೇಜಿಸಲು ಹೆಚ್ಚು ಅನುದಾನದ ಅಗತ್ಯವಿಲ್ಲ. ಆದರೆ ಈ ಯೋಜನೆ ಅಷ್ಟಕ್ಕೆ ಸೀಮಿತವಾಗಿರುವುದಿಲ್ಲ. ಹಲಸಿನ ಹಣ್ಣುಗಳು ಕೆಡದಂತೆ ಸಂರಕ್ಷಿಸಿಡಲು ಬೇಕಾದ ವ್ಯವಸ್ಥೆ ವಿಶೇಷ ಮಾರುಕಟ್ಟೆಗಳನ್ನು ಒದಗಿಸುವುದು ಮತ್ತು ರಫ್ತು ಉತ್ತೇಜಿಸಲು ಹೆಚ್ಚು ಹಣ ಬೇಕಾಗುತ್ತದೆ. ನಿಗಮದ ಬಳಿ ₹ 30000 ಕೋಟಿ ಇದೆ. ಹೀಗಾಗಿ ಈ ಯೋಜನೆಗೆ ಹಣದ ಕೊರತೆ ಇಲ್ಲ’ ಎಂದು ವಿ. ಬಾಲಸುಬ್ರಮಣಿಯನ್ ತಿಳಿಸಿದರು.
2.39 ಪಟ್ಟು ಲಾಭದಾಯಕ
‘ಚಂದ್ರ ಹಲಸಿನ ಹಣ್ಣಿನಲ್ಲಿ ಇತರ ಹಣ್ಣುಗಳು ಮತ್ತು ಸಿರಿ ಧಾನ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದ ವಿಟಮಿನ್–ಎ ಇರುತ್ತದೆ. ಹೆಚ್ಚಿನ ಪ್ರಮಾಣದ ನಾರಿನಂಶವೂ ಇರುತ್ತದೆ. ಉತ್ತರ ಭಾರತ ಮತ್ತು ವಿದೇಶಗಳಲ್ಲಿ ದೊಡ್ಡ ಮಾರುಕಟ್ಟೆ ಇದೆ’ ಎಂದು ಐಐಎಚ್‌ಆರ್ ವಿಜ್ಞಾನಿ ಕರುಣಾಕರನ್ ಅವರು ನಿಗಮಕ್ಕೆ ನೀಡಿರುವ ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಹಲಸಿನ ಹಣ್ಣನ್ನು ಸಂಸ್ಕರಿಸಿ ಆಹಾರ ಪದಾರ್ಥಗಳು ತಿಂಡಿಗಳನ್ನು ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳನ್ನೂ ಹಂಚಿಕೊಳ್ಳುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಹಲಸು ಬೆಳೆಯನ್ನು ಬೆಳೆಸಲು ₹ 6.78 ಲಕ್ಷ ವೆಚ್ಚವಾಗುತ್ತದೆ. ಆರು ವರ್ಷಗಳ ಬಳಿಕ ಒಂದು ಹೆಕ್ಟೇರ್‌ನಲ್ಲಿ ₹ 6 ಲಕ್ಷ ಲಾಭ ದೊರಕುತ್ತದೆ. ವೆಚ್ಚಕ್ಕೆ ಹೋಲಿಸಿದರೆ ಲಾಭದ ಅನುಪಾತವು 2.39 ಪಟ್ಟಿನಷ್ಟಿರುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.