ADVERTISEMENT

KMF's Nandini Products: ಮಾರುಕಟ್ಟೆಗೆ ನಂದಿನಿ ಕೇಕ್‌, ಮಫಿನ್ಸ್‌

3 ಮಾದರಿಯ 18 ವಿಧದ ಉತ್ಪನ್ನಗಳ ಬಿಡುಗಡೆ ಮಾಡಿದ ಕೆಎಂಎಫ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 22:48 IST
Last Updated 1 ಜೂನ್ 2025, 22:48 IST
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ನ 18 ನೂತನ ಉತ್ಪನ್ನಗಳನ್ನು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಬಿಡುಗಡೆ ಮಾಡಿದರು. ‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ, ಸುಚಿತ್ರಾ ಮುರಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ನ 18 ನೂತನ ಉತ್ಪನ್ನಗಳನ್ನು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಬಿಡುಗಡೆ ಮಾಡಿದರು. ‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ, ಸುಚಿತ್ರಾ ಮುರಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ವಿಶ್ವ ಹಾಲು ದಿನಾಚರಣೆಯಲ್ಲಿ ನಂದಿನಿ ಬ್ರ್ಯಾಂಡ್‌ನ ಸ್ಲೈಸ್‌ ಕೇಕ್‌, ಮಫಿನ್ಸ್ ಹಾಗೂ ಬಾರ್‌ ಕೇಕ್‌ ಎಂಬ ಮೂರು ಮಾದರಿಯ 18 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, ‘ವಿಶ್ವ ಹಾಲು ದಿನದ ಅಂಗವಾಗಿ ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಮಕ್ಕಳು ಮತ್ತು ಯುವ ಸಮುದಾಯದ ಅಭಿರುಚಿಗೆ ತಕ್ಕಂತೆ ನಂದಿನಿ ಗ್ರಾಹಕರಿಗೆ ಕೆಎಂಎಫ್‌ ಉತ್ಪನ್ನಗಳನ್ನು ಒದಗಿಸುತ್ತಿದೆ’ ಎಂದು ಹೇಳಿದರು.

ಸ್ಲೈಸ್‌ ಕೇಕ್‌ನಲ್ಲಿ ಫ್ರೂಟಿ, ವೆನಿಲ್ಲಾ, ಪೈನಾಪಲ್ ಹಾಗೂ ಚಾಕೊ ಆರೆಂಜ್‌ ಎಂಬ ನಾಲ್ಕು ವಿಭಿನ್ನ ರುಚಿಗಳ ಕೇಕ್‌ಗಳನ್ನು ಬಿಡುಗಡೆ ಮಾಡಲಾಯಿತು. ಇವು 30 ಗ್ರಾಂ. ಮತ್ತು 50 ಗ್ರಾಂ. ತೂಕದ ಪ್ಯಾಕೆಟ್‌ಗಳಲ್ಲಿ ಲಭ್ಯವಿವೆ. ಜೊತೆಗೆ ಸ್ಪಾಂಜಿ ವೆನಿಲ್ಲಾ (25 ಗ್ರಾಂ.) ಎಂಬ ವಿಶಿಷ್ಟ ರುಚಿಯ ಕೇಕ್‌ ಅನ್ನೂ ಪರಿಚಯಿಸಲಾಗಿದೆ.

ADVERTISEMENT

ಮಫಿನ್ಸ್‌ (‌ಕಪ್‌ ಕೇಕ್‌):

ಇದರಲ್ಲಿ ವೆನಿಲ್ಲಾ, ಚಾಕೊಲೇಟ್‌, ಪೈನಾಪಲ್‌, ಸ್ಟ್ರಾಬೆರಿ ಮತ್ತು ಮಾವಾ ಎಂಬ ಐದು ವಿಶಿಷ್ಟ ರುಚಿಗಳ ಕಪ್‌ ಕೇಕ್‌ಗಳನ್ನು ಬಿಡುಗಡೆ ಮಾಡಲಾಯಿತು. ಎಲ್ಲವೂ 150 ಗ್ರಾಂ. ತೂಕದ ಪೊಟ್ಟಣಗಳಲ್ಲಿ ಲಭ್ಯ.

ಎಂಟು ವಿಧದ ಕೇಕ್‌:

ವಿವಿಧ ಸ್ವಾದ ಮತ್ತು ಹಣ್ಣುಗಳನ್ನು ಬಳಸಿಕೊಂಡು ಫ್ಲಮ್‌, ಫ್ರೂಟ್‌, ವೆನಿಲ್ಲಾ, ಚಾಕೊಲೇಟ್‌, ಚಾಕೊವೆನಿಲ್ಲಾ, ವಾಲ್‌ನಟ್‌ ಬನಾನ, ಕೊಬ್ಬರಿ ಬೆಲ್ಲ ಹಾಗೂ ಚಾಕೊಲೇಟ್‌ ಬೆಲ್ಲದ ಕೇಕ್‌ಗಳನ್ನು ಬಿಡುಗಡೆ ಮಾಡಲಾಯಿತು. ಎಲ್ಲವೂ 200 ಗ್ರಾಂ. ಪೊಟ್ಟಣಗಳಲ್ಲಿ ಲಭ್ಯವಿವೆ.

ಬಿಡುಗಡೆಯಾಗಿರುವ ನೂತನ ಉತ್ಪನ್ನಗಳು ಭಾನುವಾರದಿಂದಲೇ ರಾಜ್ಯದ ಎಲ್ಲ ನಂದಿನಿ ಮಳಿಗೆಗಳಲ್ಲಿ ಸಿಗಲಿವೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಪನೀರ್‌ ಖಾದ್ಯ ಪಾಕ ಸ್ಪರ್ಧೆ ವಿಜೇತರು

ವಿಶ್ವ ಹಾಲು ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗಾಗಿ ಕೆಎಂಎಫ್ ಆಯೋಜಿಸಿದ್ದ ಪನೀರ್ ಖಾದ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಪ್ರಥಮ ಬಹುಮಾನ(₹50 ಸಾವಿರ ನಗದು) ಮಂಗಳೂರಿನ ವಿಶಿಕಾ ಕೇಶವ್ ಎರಡನೇ ಬಹುಮಾನ (₹30 ಸಾವಿರ ನಗದು) ಹಾಗೂ ಬೆಂಗಳೂರಿನ 13 ವರ್ಷದ ಬಿ.ವಿನೋದಿನಿ ಮೂರನೇ ಬಹುಮಾನ (₹20 ಸಾವಿರ) ಪಡೆದರು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 30 ಮಂದಿ ಭಾಗವಹಿಸಿದ್ದರು. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ವಿಜೇತರಿಗೆ ಬಹುಮಾನದ ಚೆಕ್‌ಗಳನ್ನು ವಿತರಿಸಿದರು. ‘ಒಗ್ಗರಣೆ ಡಬ್ಬಿ’ ಖಾತಿಯ ಮುರಳಿ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.