ADVERTISEMENT

ಕೋಗಿಲು ಬಡಾವಣೆ ಸಂತ್ರಸ್ತರಿಗೆ ಮನೆ ಹಂಚಿಕೆ: ದಾಖಲೆ ಸಂಗ್ರಹ ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 16:21 IST
Last Updated 30 ಡಿಸೆಂಬರ್ 2025, 16:21 IST
   

ಬೆಂಗಳೂರು: ಮನೆ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೋಗಿಲು ಬಡಾವಣೆ ಸಂತ್ರಸ್ತರಿಂದ ಜಿಲ್ಲಾಡಳಿತ, ಜಿಬಿಎ ಮತ್ತು ರಾಜೀವ್‌ ಗಾಂಧಿ ವಸತಿ ನಿಗಮದ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದರು.

ಬಡಾವಣೆಯಲ್ಲಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಬೈಯ್ಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ನಿರ್ಮಿಸುತ್ತಿರುವ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೆ ಅಧಿಕಾರಿಗಳು ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದಾರೆ.

ಪ್ರತಿ ಮನೆಯಿಂದ ಐದು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ತಾತ್ಕಾಲಿಕ ಆದೇಶ ಪ್ರತಿ, ಪಡಿತರ ಚೀಟಿಯನ್ನು ಜಿಬಿಎ ಅಧಿಕಾರಿಗಳ ತಂಡ ಸಂಗ್ರಹಿಸುತ್ತಿದೆ. ಸಂಗ್ರಹಿಸಿದ ದಾಖಲೆಗಳನ್ನು ಕೋಗಿಲು ಸರ್ಕಾರಿ ಶಾಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ಜಿಲ್ಲಾಡಳಿತ ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿ, ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡರು. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಿದ್ದಾರೆ. 

ಯಲಹಂಕ ತಹಶೀಲ್ದಾರ್ ಜಿ.ಎಸ್.ಶ್ರೇಯಸ್, ರಾಜೀವ್ ಗಾಂಧಿ ವಸತಿ ನಿಗಮದ ನಿರ್ದೇಶಕ ಪರಶುರಾಮ್, ಜಿಲ್ಲಾಧಿಕಾರಿ ಜಗದೀಶ್ ಸಹ ಭೇಟಿ ನೀಡಿ ಮಾಹಿತಿ ಪಡೆದರು.

‘185 ಮನೆಗಳಲ್ಲಿ 20 ಮನೆಯವರು ಬೇರೆಯವರು ಇದ್ದಾರೆ. ಅವರು ಕರ್ನಾಟಕದ ರಾಯಚೂರು, ಕಲಬುರಗಿ ಮೂಲದವರು. ಅವರೆಲ್ಲರೂ ಸ್ಥಳೀಯರಾ? ಮನೆ ಇದೆಯೇ? ಎಂಬುದನ್ನು ಪರಿಶೀಲಿಸಲಾಗುವುದು. ಆಶಾ ಕಾರ್ಯಕರ್ತೆಯರ ಬಳಿ ಇರುವ ದಾಖಲೆಗಳ ಮಾಹಿತಿ ಕಲೆ ಹಾಕಲಾಗುವುದು’ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದರು.

‘ಎಷ್ಟು ವರ್ಷದಿಂದ ವಾಸ ಮಾಡುತ್ತಿದ್ದೀರಾ? ಯಾವ ಉದ್ಯೋಗ ಮಾಡುತ್ತಿದ್ದೀರಾ? ಮಕ್ಕಳು ಯಾವ ಶಾಲೆಗೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದರು. ಅಲ್ಲದೇ ಆಧಾರ್‌ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ವಾಸ ದೃಢೀಕರಣ ಪತ್ರಗಳನ್ನು ಪರಿಶೀಲಿಸಿದರು. ಆಧಾರ್‌ ಕಾರ್ಡ್‌, ಗುರುತಿನ ಚೀಟಿ, ವಿದ್ಯುತ್ ಬಿಲ್ ಕೇಳಿ ಪಡೆದುಕೊಂಡರು‘ ಎಂದು ಸಂತ್ರಸ್ತರು ತಿಳಿಸಿದರು.

ಕೋಗಿಲು ಬಡಾವಣೆಯ ಐದು ಎಕರೆ ಪ್ರದೇಶದಲ್ಲಿ ವಾಸಿಸುತ್ತಿದ್ದ ನಿವಾಸಿಗಳ ಮನೆ ಹಾಗೂ ಶೆಡ್‌ಗಳನ್ನು ಜಿಬಿಎ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ತೆರವುಗೊಳಿಸಲಾಗಿದೆ. ಇದರಿಂದ 200ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.