
ಬೆಂಗಳೂರು: ‘ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಅರ್ಹ 25 ರಿಂದ 30 ಜನರಿಗೆ ಗುರುವಾರದ ಒಳಗೆ ಮನೆ ನೀಡಬೇಕು. ಉಳಿದ ಎಲ್ಲಾ ಅರ್ಹರಿಗೂ ಹಂತ ಹಂತವಾಗಿ ಮನೆ ನೀಡುವ ಕೆಲಸ ಆಗಬೇಕು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ನಡೆದ ಸಭೆಯಲ್ಲಿ ಬಡಾವಣೆಯಲ್ಲಿನ ಬೆಳವಣಿಗೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಇಬ್ಬರೂ ಸಚಿವರು, ‘ಕನ್ನಡಿಗರಾಗಿದ್ದು ಕೋಗಿಲು ಬಡಾವಣೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ನೆಲಸಿದ್ದರೆ ಪರಿಗಣಿಸಬೇಕು. ರಾಜ್ಯದ ಬೇರೆ ಕಡೆಯಿಂದ ಬೆಂಗಳೂರಿಗೆ ಬಂದು ನೆಲಸಿದ್ದರೆ ಅಂತವರಿಗೆ ಮೊದಲ ಆದ್ಯತೆಯಾಗಿ ಮನೆ ನೀಡಲು ಪರಿಗಣಿಸಬೇಕು’ ಎಂದು ಹೇಳಿದರು.
‘ಮಾತೃಭಾಷೆ ಬೇರೆಯಾಗಿದ್ದರೂ ತಲೆಮಾರಿನಿಂದ ಕರ್ನಾಟಕದಲ್ಲಿ ವಾಸ ಇದ್ದು, ಬೆಂಗಳೂರಿಗೆ ವಲಸೆ ಬಂದಿದ್ದರೆ ಮೂಲ ತಾಲೂಕು-ಊರು ಯಾವುದು ಎಂದು ತಿಳಿದು ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಪರಿಶೀಲಿಸಿ ಮಾಹಿತಿ ನೀಡಿದ ನಂತರ ನಿರಾಶ್ರಿತರಿಗೆ ಮನೆ ನೀಡಬೇಕು. ಹೊರ ರಾಜ್ಯದವರನ್ನು ಹುಡುಕುವ ಸಲುವಾಗಿ ಕನ್ನಡಿಗರಿಗೆ ಮನೆ ನೀಡುವುದಕ್ಕೆ ತಡ ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.
’ಅಲೆಮಾರಿಗಳಿಗೆ ಭೂ ಒತ್ತುವರಿ ಅಗತ್ಯ ಇಲ್ಲ. ಅವರು ಬಂದು ಹೋಗುತ್ತಲೇ ಇರುತ್ತಾರೆ. ಹಾಗೆಂದು ಭೂ ಒತ್ತುವರಿದಾರರನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಆಗಬೇಕು. ಸರ್ಕಾರಿ ಜಮೀನಲ್ಲಿ ಶೆಡ್ ಹಾಕಿದ ಕೂಡಲೇ ಅವರಿಗೆ ಮನೆ ಕೊಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಲಿದ್ದು, ಸರ್ಕಾರಿ ಜಮೀನು ಒತ್ತುವರಿಗೆ ನಾವೇ ಪರೋಕ್ಷವಾಗಿ ಕುಮ್ಮಕ್ಕು ಕೊಟ್ಟಂತಾಗಲಿದೆ. ಇದನ್ನು ತಡೆಯಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.