ADVERTISEMENT

ಮಾನಸಿಕ ಒತ್ತಡ ಕಾಡಿತ್ತು: ವಿರಾಟ್ ಕೊಹ್ಲಿ

ಪಿಟಿಐ
Published 19 ಫೆಬ್ರುವರಿ 2021, 21:47 IST
Last Updated 19 ಫೆಬ್ರುವರಿ 2021, 21:47 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ತೀವ್ರವಾದ ಖಿನ್ನತೆಯಿಂದ ಬಳಲಿದ್ದಾಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ಕೊಹ್ಲಿ ಬಹಿರಂಗಪಡಿಸಿದ್ದಾರೆ.

’2014ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಇಡೀ ಜಗತ್ತಿನಲ್ಲಿ ಏಕಾಂಗಿಯಾಗಿ ನಿಂತಂತೆ ಭಾಸವಾಗಿತ್ತು. ನಂತರ ಮತ್ತೆ ಚೇತರಿಸಿಕೊಂಡು ಯಶಸ್ಸು ಸಾಧಿಸಿದೆ‘ ಎಂದು ’ನಾಟ್ ಜಸ್ಟ್‌ ಕ್ರಿಕೆಟ್ ಪಾಡ್‌ಕಾಸ್ಟ್‌‘ನಲ್ಲಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮಾರ್ಕ್ ನಿಕೊಲಸ್‌ ಜೊತೆಯ ಸಂವಾದದಲ್ಲಿ ತಿಳಿಸಿದ್ದಾರೆ.

’ನಮ್ಮಿಂದ ರನ್‌ ಗಳಿಕೆಯಾಗುತ್ತಿಲ್ಲ ಎಂಬ ಭಾವವು ಬಹಳ ಬೇಸರದ ಸಂಗತಿಯಾಗಿರುತ್ತದೆ. ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಕೂಡ ಇಂತಹ ಪರಿಸ್ತಿತಿಯನ್ನು ಅನುಭವಿಸಿರುತ್ತಾನೆ. ಅಂತಹ ಸಂದರ್ಭದಲ್ಲಿ ಬಹಳಷ್ಟು ವಿಷಯಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ‘ ಎಂದು ಅಭಿಪ್ರಾಯಪಟ್ಟರು.

ADVERTISEMENT

2014ರಲ್ಲಿ ಭಾರತವು ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳ ಸರಣಿ ಆಡಿತ್ತು. ಆಗ ವಿರಾಟ್ (1, 8, 25, 0, 39, 28, 0,7, 6 ಮತ್ತು 20) ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು.ಅದರ ನಂತರದಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ಪುಟಿದೆದ್ದರು. ಅಲ್ಲಿ ಟೆಸ್ಟ್ ಸರಣಿಯಲ್ಲಿ 692 ರನ್‌ಗಳನ್ನು ಗಳಿಸಿದರು.

’ಮಾನಸಿಕ ಒತ್ತಡದ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಅದು ಒಬ್ಬ ವ್ಯಕ್ತಿಯ ಭವಿಷ್ಯವನ್ನೇ ಹಾಳುಗೆಡವಬಲ್ಲದು. ನಮ್ಮ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಒಬ್ಬ ವೃತ್ತಿಪರ ಸಲಹೆಗಾರ ಇರಬೇಕು. ಒತ್ತಡ ನಿವಾರಿಸುವಂತಹ ಪ್ರಾಮಾಣಿಕ ಕಾಳಜಿಯಿರುವ ವ್ಯಕ್ತಿ ಅವರಾಗಿಬೇಕು‘ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.