
ನೆಲಮಂಗಲ: ಸರ್ಕಾರಿ ಶಾಲೆಗಳನ್ನು ಮುಚ್ಚಿ ‘ಕೆಪಿಎಸ್- ಮ್ಯಾಗ್ನೆಟ್’ ಯೋಜನೆ ಜಾರಿಗೊಳಿಸುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿಶ್ವೇಶ್ವರಪುರದ ಸರ್ಕಾರಿ ಶಾಲೆಯ ಮುಂಭಾಗ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು.
ತಾಲ್ಲೂಕಿನ ವಿಶ್ವೇಶ್ವರಪುರ, ಲೋಹಿತನಗರ, ಮೈಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಇಸ್ಲಾಂಪುರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳನ್ನು ಉಳಿಸಿಕೊಳ್ಳಲು ನಡೆದ ಸಮಾವೇಶದಲ್ಲಿ ಐದು ಹಳ್ಳಿಗಳ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ವಿ.ಕಲ್ಯಾಣ್ ಕುಮಾರ್ ಮಾತನಾಡಿ, ‘ಶಿಕ್ಷಣದ ಹಕ್ಕನ್ನು ಉಳಿಸಿಕೊಳ್ಳಲು ಎಐಡಿಎಸ್‌ಒ ದೇಶದಾದ್ಯಂತ ಹೋರಾಟ ನಡೆಸುತ್ತಿದೆ. ಸರ್ಕಾರವು ಮೂಲಸೌಕರ್ಯ ಒದಗಿಸದೆ, ದಾಖಲಾತಿ ಕೊರತೆಯ ನೆಪವೊಡ್ಡಿ ಮ್ಯಾಗ್ನೆಟ್ ಯೋಜನೆಯ ಮೂಲಕ ರಾಜ್ಯದ 40 ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಖಂಡನೀಯ’ ಎಂದರು.
‘ವಾಹನ ಸೌಲಭ್ಯದ ಆಮಿಷವೊಡ್ಡಿ ಹಳ್ಳಿ ಶಾಲೆಗಳನ್ನು ನಾಶಮಾಡಿ, ಪೋಷಕರನ್ನು ಖಾಸಗಿ ಶಾಲೆಗಳತ್ತ ತಳ್ಳಲಾಗುತ್ತಿದೆ. ಖಾಸಗಿ ಸಂಸ್ಥೆಗಳಿಗೆ ಮಣೆ ಹಾಕುವ ಬದಲು ಹಳ್ಳಿಯ ಶಾಲೆಗಳನ್ನೇ ಮಾದರಿ ಶಾಲೆಗಳನ್ನಾಗಿ ಮಾಡಲು ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು.
ವಿಶ್ವೇಶ್ವರಪುರ ಶಾಲೆ ನಿವೃತ್ತ ಶಿಕ್ಷಕ್ಷಿ ಗೀತಾ ಮಾತನಾಡಿ, ‘5 ಕಿಲೋಮೀಟರ್ ದೂರದ ಶಾಲೆಗೆ ಪುಟ್ಟ ಮಕ್ಕಳು ಪ್ರತಿದಿನ ಪ್ರಯಾಣ ಮಾಡುವುದು ಅಸಾಧ್ಯ. ಇದು ಮಕ್ಕಳನ್ನು ಶಿಕ್ಷಣದಿಂದ ದೂರವಿಡುವ ಸಂಚು’ ಎಂದು ಆತಂಕ ವ್ಯಕ್ತಪಡಿಸಿದರು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷರಾದ ಅಭಯ ದಿವಾಕರ್, ಮೈಲನಹಳ್ಳಿಯ ವೆಂಕಟೇಶ್, ವಿಶ್ವೇಶ್ವರಪುರ ಮುಖಂಡ ಬೈಲಮೂರ್ತಿ, ಇಸ್ಲಾಂಪುರ ‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ಯ ಸದಸ್ಯರಾದ ಅಸ್ಲಾಂ ಪಾಷ, ಎಐಯುಟಿಯುಸಿ ಕಾರ್ಮಿಕ ಮುಖಂಡರಾದ ಹನುಮೇಶ್ ಮಾತನಾಡಿದರು. ಎಐಡಿಎಸ್‌ಒ ಜಿಲ್ಲಾ ಕಾರ್ಯಕಾರಿ ಮಂಡಳಿಯ ಸದಸ್ಯೆ ಎಸ್.ಪ್ರಕೃತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.