ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ 24 ಗಂಟೆಯೂ ಸ್ವಚ್ಛತೆ ಕಾರ್ಯ ನಡೆಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.
ಕೆ.ಆರ್. ಮಾರುಕಟ್ಟೆಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮಾರುಕಟ್ಟೆಯಲ್ಲಿ ಪ್ರತಿಯೊಂದು ಮಳಿಗೆಯೂ ಕಡ್ಡಾಯವಾಗಿ ತ್ಯಾಜ್ಯ ಹಾಕಲು ಕಸದ ಡಬ್ಬಿ ಇಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರಿಗೆ ದಂಡ ವಿಧಿಸಿ, ನಿಗದಿತ ಸ್ಥಳದಲ್ಲಿಯೇ ತ್ಯಾಜ್ಯ ಹಾಕಲು ಮಾರ್ಷಲ್‌ಗಳು ಜಾಗೃತಿ ಮೂಡಿಸಬೇಕು’ ಎಂದರು.
ಪ್ರತಿನಿತ್ಯ ಸುಮಾರ 70 ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಅದನ್ನು ಪರಿಣಾಮಕಾರಿ ಹಾಗೂ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಲು ಮಾಸ್ಟರ್ ಪ್ಲಾನ್ ತಯಾರಿಸಬೇಕು ಎಂದು ಸೂಚಿಸಿದರು.
ಮಾರುಕಟ್ಟೆಯ ನೆಲ ಮಹಡಿಯಲ್ಲಿ 529, ಮೊದಲನೇ ಮಹಡಿಯಲ್ಲಿ 494 ಹಾಗೂ ಎರಡನೇ ಮಹಡಿಯಲ್ಲಿ 265 ಸೇರಿದಂತೆ ಒಟ್ಟು 1,288 ಮಳಿಗೆಗಳಿವೆ. ಬಾಡಿಗೆ ಪಾವತಿಸುವ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಂಡು, ಪಾಲಿಕೆಗೆ ಮಳಿಗೆಗಳಿಂದ ಬರಬೇಕಿರುವ ಬಾಕಿ ಹಣವನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ ಹೇಳಿದರು.
‘ಮಳಿಗೆಗಳಿಗೆ ನೀಡಿರುವ ಜಾಗದಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಅದಕ್ಕಿಂದ ಹೆಚ್ಚುವರಿ ಜಾಗ ಅತಿಕ್ರಮಣ ಮಾಡಿಕೊಂಡು ಮಾರಾಟ ಮಾಡುವ ಮಳಿಗೆಗಳಿಗೆ ಕೂಡಲೇ ದಂಡ ವಿಧಿಸಿ ಅತಿಕ್ರಮಣವನ್ನು ತೆರವುಗೊಳಿಸಬೇಕು. ಮತ್ತೆ ಅತಿಕ್ರಮಣ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಬೇಕು’ ಎಂದರು.
ಕೆ.ಆರ್. ಮಾರುಕಟ್ಟೆಯ 1ನೇ ಮಹಡಿಯಲ್ಲಿರುವ ಶೌಚಾಲಯವನ್ನು ನಾಗರಿಕರು ಬಳಸುವಂತೆ ಸ್ವಚ್ಛಗೊಳಿಸಿ. ಮಾರುಕಟ್ಟೆಯಲ್ಲಿರುವ ಮತ್ತೊಂದು ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡದೇ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಇದಕ್ಕೆ ಪರ್ಯಾಯವಾಗಿ ಪಕ್ಕದದಲ್ಲಿನ ಖಾಲಿ ಸ್ಥಳದಲ್ಲಿದ್ದು ಇನ್ನೊಂದು ಶೌಚಾಲಯ ನಿರ್ಮಿಸಲು ಸೂಚಿಸಿದರು.
ನುಣುಚಿಕೊಳ್ಳಬೇಡಿ: ‘ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಲ್ಲಿ ಸಮನ್ವಯತೆ ಇಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ, ಎಲ್ಲ ವಿಭಾಗದ ಆಧಿಕಾರಿಗಳು ಮಾರುಕಟ್ಟೆಯ ಸ್ವಚ್ಛತೆಗಾಗಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ (ಬಿಸಿಸಿಸಿ) ಆಯುಕ್ತ ರಾಜೇಂದ್ರ ಚೋಳನ್ ಆದೇಶಿಸಿದರು.
ರಸ್ತೆ ವಿಸ್ತರಣೆ ಶೀಘ್ರ: ರಮೇಶ್ ಭೋಗನಹಳ್ಳಿ
ತಿರುವಿನಿಂದ ಪಣತ್ತೂರು ರೈಲ್ವೆ ಹಳಿಯವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ಆಯುಕ್ತ ಡಿ.ಎಸ್. ರಮೇಶ್ ಅವರು ಎಂಜಿನಿಯರ್‌ಗಳಿಗೆ ತಿಳಿಸಿದರು. ನಗರ ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗ ಟಿಡಿಆರ್ ವಿಭಾಗ ಹಾಗೂ ತಹಶೀಲ್ದಾರ್‌ಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪಣತ್ತೂರು ಗ್ರಾಮದ ಪರಿಮಿತಿಯಲ್ಲಿರುವ ಭೋಗನಹಳ್ಳಿ ತಿರುವಿನಿಂದ ಪಣತ್ತೂರು ರೈಲ್ವೆ ಹಳಿವರೆಗೆನ ರಸ್ತೆಯು ಬಳಗೆರೆ ಹೊರವರ್ತುಲ ರಸ್ತೆ ಕಾಡುಬಿಸನಹಳ್ಳಿಯಿಂದ ವರ್ತೂರು-ಗುಂಜೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುತ್ತದೆ. ಈ ರಸ್ತೆಯು ಪಣತ್ತೂರು ಗ್ರಾಮದ ಪರಿಮಿತಿಯಲ್ಲಿ ತುಂಬಾ ಕಿರಿದಾಗಿದ್ದು ಪ್ರತಿ ನಿತ್ಯ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು ಸಂಪರ್ಕ ರಸ್ತೆಯನ್ನು 12 ಮೀಟರ್‌ಗೆ ವಿಸ್ತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಂಜಿನಿಯರ್‌ಗಳು ವಿವರಿಸಿದರು. ‘ಕೂಡಲೇ ಭೂಸ್ವಾಧೀನ ಮಾಡಿಕೊಂಡು ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾರ್ಯವನ್ನು ಆದ್ಯತೆ ಮೇರೆಗೆ ತುರ್ತಾಗಿ ನಿರ್ವಹಿಸಬೇಕು. ಭೂಸ್ವಾಧೀನಕ್ಕೆ ಅಗತ್ಯವಿರುವ ದಾಖಲೆಗಳನ್ನು ಪಡೆದು ನೇರ ಖರೀದಿ ಮೂಲಕ ಪರಿಹಾರ ಒದಗಿಸಬೇಕು’ ಎಂದು ರಮೇಶ್ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.