
ಕೆ.ಆರ್.ಪುರ: ‘ನಮ್ಮ ನೆಲದ ಸಂಸ್ಕೃತಿ, ಪರಂಪರೆಯನ್ನು ಉಳಿಸಲು ನಾವೆಲ್ಲರೂ ಕಟಿಬದ್ಧರಾಗಿ ನಿಲ್ಲಬೇಕು’ ಎಂದು ಶಾಸಕಿ ಮಂಜುಳಾ ಲಿಂಬಾವಳಿ ಹೇಳಿದರು.
ಕೆ.ಆರ್.ಪುರ ಸಮೀಪದ ಕಾಟಂನಲ್ಲೂರಿನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಭಾರತ ಮಾತೆ ಪೂಜೆ ಹಾಗೂ ಮಹದೇವಪುರ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಭವ್ಯ ಪರಂಪರೆಯನ್ನು ಹೊಂದಿರುವ ಭಾರತ ದೇಶ ಬೇರೆ ದೇಶಗಳಿಗಿಂತ ವಿಭಿನ್ನವಾಗಿದೆ. ಭಾರತ ಎಲ್ಲಾ ಭಾಷೆ ಎಲ್ಲಾ ಧರ್ಮದ ಜನರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಸೌಹಾರ್ದ ಮೆರೆಯುತ್ತಿದೆ. ದೇಶವನ್ನು ಪ್ರತಿಯೊಬ್ಬರೂ ಗೌರವಿಸಬೇಕು’ ಎಂದರು.
‘ಪ್ರತಿ ವರ್ಷ ಹಮ್ಮಿಕೊಳ್ಳುವ ಭಾರತ ಮಾತೇ ಪೂಜೆ ಹಾಗೂ ಮಹದೇವಪುರ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುತ್ತ ಬಂದಿರುವುದು ಶ್ಲಾಘನೀಯ. ಈ ವರ್ಷವೂ ಕ್ಷೇತ್ರದ 26 ಸಾಧಕರಿಗೆ ಮಹದೇವಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಉತ್ತಮ ಕಾರ್ಯ’ ಎಂದು ಹೇಳಿದರು.
ಮಹದೇವಪುರ ಉತ್ಸವದಲ್ಲಿ ಸಂಗೀತ, ನಗೆ ಹಬ್ಬ, ನೃತ್ಯ, ದೇಹದಾರ್ಢ್ಯ ಸ್ಪರ್ಧೆ, ಯೋಗ, ಡೊಳ್ಳು ಕುಣಿತ, ದೇವರುಗಳ ನೃತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕರುಣಾಕರ್ ರೈ, ಸಂಸದ ಪಿ.ಸಿ.ಮೋಹನ್, ಮಾಜಿ ಶಾಸಕ ಅರವಿಂದ ಲಿಂಬಾವಳಿ, ಮಾಜಿ ಸಂಸದ ಮುನಿಸ್ವಾಮಿ, ಮಹದೇವಪುರ ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಪ್ರಧಾನ ಕಾರ್ಯದರ್ಶಿ ಎಲ್.ರಾಜೇಶ್ ಮುಖಂಡರಾದ ಪಾಪಣ್ಣ, ಮನೋಹರರೆಡ್ಡಿ, ರಾಜಾರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.