ADVERTISEMENT

ಕೆ.ಆರ್.ಪುರ: ಮೆಟ್ರೊದಿಂದ ಮೇಲ್ಸೇತುವೆ

ಕಾರಿಡಾರ್‌ ಬದಲು ಟಿನ್‌ ಫ್ಯಾಕ್ಟರಿ–ಮಹದೇವಪುರ ರಸ್ತೆ ವಿಸ್ತರಣೆಗೆ ಒಪ್ಪಿಗೆ

ಚಿರಂಜೀವಿ ಕುಲಕರ್ಣಿ
Published 4 ಅಕ್ಟೋಬರ್ 2019, 20:10 IST
Last Updated 4 ಅಕ್ಟೋಬರ್ 2019, 20:10 IST

ಬೆಂಗಳೂರು: ಕೆ.ಆರ್‌. ಪುರ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮೇಲ್ಸೇತುವೆ ನಿರ್ಮಿಸಲು ಮುಂದಾಗಿದೆ.

ಈ ಮೇಲ್ಸೇತುವೆಗೆ ಕಸ್ತೂರಿನಗರ ಮತ್ತು ಕೆ.ಆರ್. ಸಂಪರ್ಕಿಸುವ ಎರಡು ಲೂಪ್‌ಗಳನ್ನು ನಿರ್ಮಾಣ ಮಾಡುವುದರ ಜೊತೆಗೆ,ಟಿನ್‌ ಫ್ಯಾಕ್ಟರಿ ಮತ್ತು ಮಹದೇವಪುರ ಜಂಕ್ಷನ್‌ ರಸ್ತೆ ವಿಸ್ತರಣೆ ಕಾರ್ಯವನ್ನು ಕೈಗೊಳ್ಳಲು ನಿಗಮಕ್ಕೆ ನಗರಾಭಿವೃದ್ಧಿ ಇಲಾಖೆ ಪ್ರಾಥಮಿಕ ಅನುಮೋದನೆ ನೀಡಿದೆ.

ಈ ಕುರಿತು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ, ಅದರಂತೆ ಕ್ರಮ ವಹಿಸಲು ನಿಗಮಕ್ಕೆ ಇಲಾಖೆ ಕಳೆದ ಸೋಮವಾರ ಸೂಚನೆ ನೀಡಿದೆ. ಕೆ.ಆರ್. ಪುರ ಜಂಕ್ಷನ್‌ನಲ್ಲಿ ರೋಡ್‌ ಕಮ್‌ ರೈಲು ಕಾರಿಡಾರ್‌ ನಿರ್ಮಾಣ ಮಾಡುವ ಪ್ರಸ್ತಾವವನ್ನು ಈ ಮೊದಲು ನಿಗಮವು ಮುಂದಿಟ್ಟಿತ್ತು. ಹೊರವರ್ತುಲ ಮಾರ್ಗದ (ಎರಡನೇ ಹಂತದ 2ಎ) ಜೊತೆಗೆ ವೈಟ್‌ಫೀಲ್ಡ್‌ ಮೆಟ್ರೊ ಮಾರ್ಗ (ಎರಡನೇ ಹಂತದ ರೀಚ್‌ 1)ವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಈ ಕಾರಿಡಾರ್‌ ನಿರ್ಮಾಣ ಸೂಕ್ತ ಎಂದು ನಿಗಮ ಹೇಳಿತ್ತು.

ADVERTISEMENT

ಆದರೆ, ಈ ಕಾರಿಡಾರ್‌ ನಿರ್ಮಾಣಕ್ಕೆ ಮುಂದಾದರೆ ಹಲವು ಸವಾಲುಗಳು ಎದುರಾಗುತ್ತವೆ ಮತ್ತು ಪ್ರಾಯೋಗಿಕವಾಗಿಯೂ ಅನುಷ್ಠಾನ ಕಷ್ಟ ಎಂದು ಕಳೆದ ಆಗಸ್ಟ್‌ನಲ್ಲಿ ನಗರಾಭಿವೃದ್ಧಿ ಇಲಾಖೆಗೆ ನೀಡಿದ ಸಮಗ್ರ ಯೋಜನಾ ವರದಿಯಲ್ಲಿ ನಿಗಮವು ಹೇಳಿತ್ತು.

ಮೇಲ್ಸೇತುವೆಯೇ ಪರ್ಯಾಯ

ಕಾರಿಡಾರ್‌ಗೆ ಪರ್ಯಾಯವಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಧ್ಯಯನ ಕೈಗೊಂಡ ನಿಗಮ, ರಸ್ತೆ ಅಗಲಗೊಳಿಸುವುದು ಮತ್ತು ಕೆ.ಆರ್. ಪುರದಲ್ಲಿ ಮೇಲ್ಸೇತುವೆ ನಿರ್ಮಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿತು.ರಸ್ತೆ ವಿಸ್ತರಣೆಗಾಗಿ 12,140 ಚ.ಮೀ. ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. 6 ಮಾರ್ಗಗಳ ಬದಲಿಗೆ, ಮಹದೇವಪುರ ಜಂಕ್ಷನ್‌ ಮತ್ತು ಟಿನ್‌ಫ್ಯಾಕ್ಟರಿ ನಡುವಿನ ಎರಡು ಮಾರ್ಗ ಕಡಿತಗೊಳಿಸಿ, 4 ದೊಡ್ಡ ಮಾರ್ಗಗಳು ಮತ್ತು ಎರಡು ಸರ್ವೀಸ್‌ ರಸ್ತೆಗಳನ್ನು ನಿರ್ಮಿಸುವ ಸಲಹೆಯನ್ನು ಸರ್ಕಾರಕ್ಕೆ ನೀಡಿತ್ತು.

ಮೇಲ್ಸೇತುವೆಗಾಗಿ 6,894 ಚ.ಮೀ. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಈ ಮೇಲ್ಸೇತುವೆಯು ಎರಡು ಏಕಮಾರ್ಗ ಲೂಪ್‌ಗಳನ್ನು ಹೊಂದಲಿದ್ದು, ಇವು ಕಸ್ತೂರಿನಗರ ಮತ್ತು ಕೆ.ಆರ್. ಪುರವನ್ನು ಸಂಪರ್ಕಿಸಲಿವೆ.‘ಸರ್ಕಾರವು ಪ್ರಾಥಮಿಕ ಅನುಮೋದನೆ ನೀಡಿದೆ. ಸಮಗ್ರ ಯೋಜನಾ ವರದಿ ನೀಡಿದ ನಂತರ ಅಂತಿಮ ಅನುಮೋದನೆ ದೊರೆಯಲಿದೆ’ ಎಂದು ನಿಗಮದ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.