ADVERTISEMENT

ಕೆ.ಆರ್.ಪುರ | ಸರ್ಕಾರಿ ಜಮೀನಿನದಲ್ಲಿ ಅಪಾರ್ಟ್‌ಮೆಂಟ್‌ಗೆ ದಾರಿ: ಆರೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 16:07 IST
Last Updated 24 ಫೆಬ್ರುವರಿ 2026, 16:07 IST
ಅಪಾರ್ಟ್‌ಮೆಂಟ್‌ಗೆ ರಸ್ತೆ ಕಲ್ಪಿಸಲು ಸರ್ಕಾರಿ ಜಾಗವನ್ನು ಬಳಸಲಾಗುತ್ತಿದೆ ಎಂದು ದೊಡ್ಡಗುಬ್ಬಿ ಗ್ರಾಮಸ್ಥರು ಜಿಲ್ಲಾಡಳಿತದ ಫಲಕದ ಮುಂದೆ ಪ್ರತಿಭಟಿಸಿದರು
ಅಪಾರ್ಟ್‌ಮೆಂಟ್‌ಗೆ ರಸ್ತೆ ಕಲ್ಪಿಸಲು ಸರ್ಕಾರಿ ಜಾಗವನ್ನು ಬಳಸಲಾಗುತ್ತಿದೆ ಎಂದು ದೊಡ್ಡಗುಬ್ಬಿ ಗ್ರಾಮಸ್ಥರು ಜಿಲ್ಲಾಡಳಿತದ ಫಲಕದ ಮುಂದೆ ಪ್ರತಿಭಟಿಸಿದರು   

ಕೆ.ಆರ್.ಪುರ: ಅಪಾರ್ಟ್‌ಮೆಂಟ್‌ಗೆ ಸರ್ಕಾರಿ ಜಾಗದಲ್ಲಿ ರಸ್ತೆ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿಯವರು ಮಾಡಿರುವ ಆದೇಶವನ್ನು ರದ್ದುಗೊಳಿಸಿ, ಸರ್ಕಾರಿ ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕು ಎಂದು ದೊಡ್ಡಗುಬ್ಬಿ ಗ್ರಾಮಸ್ಥರು ಒತ್ತಾಯಿಸಿದರು.

‘ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ದೊಡ್ಡಗುಬ್ಬಿ ಗ್ರಾಮದ ಸರ್ವೆ ನಂಬರ್ 14ರಲ್ಲಿ 7 ಗುಂಟೆ ಸರ್ಕಾರಿ ಜಮೀನು ಇದೆ. ಈ ಜಮೀನಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ 12/10 ಹಾಗೂ 12/11ರಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಲು ಉದ್ದೇಶಿಸಿ, 2021ರಲ್ಲಿ ಭೂ ಪರಿವರ್ತನೆ ಕೂಡ ಮಾಡಲಾಗಿದೆ. ಇಂತಹ ಜಮೀನಿಗೆ ರಸ್ತೆ ಉದ್ದೇಶಕ್ಕಾಗಿ ಸರ್ಕಾರಿ ಜಾಗವನ್ನು ಮೀಸಲಿಟ್ಟಿರುವುದು ಕಾನೂನು ಬಾಹಿರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಜಾಗ ಪರಿಶೀಲನೆ ಮಾಡದೇ ಸರ್ಕಾರಕ್ಕೆ ಕೃಷಿ ಭೂಮಿ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ರಸ್ತೆ ಉದ್ದೇಶಕ್ಕಾಗಿ ಆದೇಶ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸರ್ಕಾರಿ ಜಾಗವನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಭೂ ಮಾಫಿಯಾದವರೊಂದಿಗೆ ಶಾಮಿಲಾಗಿದ್ದಾರೆ’ ಎಂದು ದೊಡ್ಡಗುಬ್ಬಿ ಗ್ರಾಮಸ್ಥ ಎನ್. ಚಂದ್ರಶೇಖರ್ ದೂರಿದರು.

ADVERTISEMENT

‘2021-22ರಲ್ಲಿ ಭೂ ಪರಿವರ್ತನೆಯಾದ ಜಮೀನಿಗೆ ಕೃಷಿ ಭೂಮಿ ಎಂದು ಅಧಿಕಾರಿಗಳು ತಪ್ಪು ವರದಿ ನೀಡಿ ಸರ್ಕಾರವನ್ನು ಹಾದಿ ತಪ್ಪಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಈ ಸಂಬಂಧ ಆದೇಶವನ್ನು ರದ್ದುಗೊಳಿಸಿ ಮುಂದೆ ಯಾರು ಒತ್ತುವರಿ ಮಾಡದಂತೆ ಸುತ್ತಲೂ ತಡೆಗೋಡೆ ನಿರ್ಮಿಸಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಬೇಕು’ ಎಂದು ದೊಡ್ಡಗುಬ್ಬಿ ನಿವಾಸಿ ಜಗದೀಶ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.