ADVERTISEMENT

ಜಿಬಿಎ | ಪೂರ್ವ ನಗರಪಾಲಿಕೆ: ಆಸ್ತಿ ತೆರಿಗೆ ಪಾವತಿಸದ 5 ಆಸ್ತಿ ಹರಾಜು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 17:43 IST
Last Updated 22 ಫೆಬ್ರುವರಿ 2026, 17:43 IST
   

ಕೆ.ಆರ್.ಪುರ: ಆಸ್ತಿ ತೆರಿಗೆ ಪಾವತಿಸದೇ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಾರಣದಿಂದ ಪೂರ್ವ ನಗರಪಾಲಿಕೆ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತೆ ಸುಧಾ ಹಾಗೂ ಕಂದಾಯ ಅಧಿಕಾರಿ ಬಸವರಾಜ ಮಗಿ ಸಮಕ್ಷಮದಲ್ಲಿ ಸ್ವತ್ತುಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು.

ಹರಾಜಿನಲ್ಲಿ ಪೂರ್ವ ನಗರಪಾಲಿಕೆ ವ್ಯಾಪ್ತಿಯ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದ್ದ 25 ಆಸ್ತಿಗಳ ಪೈಕಿ ಐದು ಆಸ್ತಿಗಳು ಹರಾಜಿನಲ್ಲಿ ಮಾರಾಟವಾಗಿವೆ.

ಹೆಚ್ಚು ಬಾಕಿ ಉಳಿಸಿಕೊಂಡವರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿತ್ತು, ಪತ್ರಿಕಾ ಪ್ರಕಟಣೆ ಮೂಲಕ ನೋಟಿಸ್ ಹಾಗೂ ಕರೆ ಮಾಡಿ ಸಂದೇಶ ಕಳಿಸಿ ಜಪ್ತಿ ಆದೇಶ ಹೊರಡಿಸಲಾಗಿತ್ತು. ಅದರೂ ತೆರಿಗೆ ಪಾವತಿ ಮಾಡಿಲ್ಲ, ಹಾಗಾಗಿ 25 ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು.

ADVERTISEMENT

ಇದರಲ್ಲಿ ಹತ್ತು ಆಸ್ತಿ ಮಾಲೀಕರು ಸ್ಥಳದಲ್ಲಿಯೇ ತೆರಿಗೆ ಪಾವತಿ ಮಾಡಿದ್ದಾರೆ. ಉಳಿದ ಹತ್ತು ಆಸ್ತಿಯ ಮಾಲೀಕರು ತೆರಿಗೆ ಪಾವತಿ ಮಾಡಲು ಮುಂದೆ ಬಂದಿದ್ದಾರೆ.

‘ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹೊಯ್ಸಳ ನಗರದ ಪಿ.ಮೋಹನ್‌ಗೆ ಸೇರಿದ ಆಸ್ತಿ ₹1.30 ಕೋಟಿ, ಗುರುಮೂರ್ತಿರೆಡ್ಡಿ ಬಡಾವಣೆಯ ಜಿ.ರಾಮಯ್ಯ ಎಂಬುವವರಿಗೆ ಸೇರಿದ ಆಸ್ತಿ ₹1.63 ಕೋಟಿ ಹಾಗೂ ವಿಜಿನಾಪುರದ ಅಯ್ಯಪ್ಪ ದೇವಸ್ಥಾನ ಬಳಿಯ ಅಮೀನ್‌ ಎಂಬುವವರಿಗೆ ಸೇರಿದ ಅಸ್ತಿ ₹93.17 ಲಕ್ಷ , ಅನ್ನಸಂದ್ರಪಾಳ್ಯದಲ್ಲಿ ಶಶಿ ಎಂಬುವವರಿಗೆ ಸೇರಿದ ಆಸ್ತಿ ₹47.42 ಲಕ್ಷ ಹಾಗೂ ಬಸವನಪುರದಲ್ಲಿ ಝಾನ್ಸಿ ರಾಣಿ ಅವರಿಗೆ ಸೇರಿದ ಆಸ್ತಿ ₹1.28 ಕೋಟಿಗೆ ಮಾರಾಟವಾಗಿವೆ’ ಎಂದು ಜಂಟಿ ಆಯುಕ್ತೆ ಸುಧಾ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.