ADVERTISEMENT

ಕಡಿಯಬೇಕಾದ ಮರಗಳ ಸಂಖ್ಯೆ ಶೇ 30ರಷ್ಟು ಇಳಿಕೆ: ಜಿಕೆವಿಕೆ ತಜ್ಞರಿಂದ ಅಧ್ಯಯನ

ಕೆಆರ್‌ಡಿಸಿಎಲ್‌ನಿಂದ ವಿವಿಧ ರಸ್ತೆಗಳ ವಿಸ್ತರಣೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 21:18 IST
Last Updated 7 ಮಾರ್ಚ್ 2021, 21:18 IST
ರಸ್ತೆ ವಿಸ್ತರಣೆ ಕಾಮಗಾರಿ (ಸಾಂದರ್ಭಿಕ ಚಿತ್ರ)
ರಸ್ತೆ ವಿಸ್ತರಣೆ ಕಾಮಗಾರಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ರಸ್ತೆ ವಿಸ್ತರಣೆ ಮಾಡುತ್ತಿರುವ ಆರು ಕಾಮಗಾರಿಗಳ ಬಗ್ಗೆಯೂ ಕೂಲಂಕಷವಾಗಿ ಅಧ್ಯಯನ ನಡೆಸಿರುವಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಗಾಂಧಿ ಕೃಷಿವಿಜ್ಞಾನ ಕೇಂದ್ರದ (ಜಿಕೆವಿಕೆ) ತಜ್ಞರ ಸಮಿತಿ ಈ ಹಿಂದೆ ಕಡಿಯಲು ಉದ್ದೇಶಿಸಿದ್ದ ಶೇ 30ರಷ್ಟು ಮರಗಳನ್ನು ಉಳಿಸಿಕೊಳ್ಳಬಹುದು ಎಂದು ಶಿಫಾರಸು ಮಾಡಿದೆ.

ನಗರದ ಹೊರವಲಯಗಳಲ್ಲಿ ವಿವಿಧ ರಸ್ತೆಗಳ ವಿಸ್ತರಣೆಗಾಗಿ 2,300ಕ್ಕೂ ಅಧಿಕ ಮರಗಳನ್ನು ಕಡಿದಿರುವ ಕೆಆರ್‌ಡಿಸಿಎಲ್‌ ಹೈಕೋರ್ಟ್‌ ಮಧ್ಯಪ್ರವೇಶ ಮಾಡದೇ ಇರುತ್ತಿದ್ದರೆ, ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯು ಬೆಂಗಳೂರು ಹೊರವಲಯಕ್ಕೆ ಅನ್ವಯವಾಗದು ಎಂದು ಹೇಳಿಕೊಂಡು ಇನ್ನೂ 7500ಕ್ಕೂ ಅಧಿಕ ಮರಗಳ ಮಾರಣ ಹೋಮಕ್ಕೆ ಸಜ್ಜಾಗಿತ್ತು. ಅರಣ್ಯ ಇಲಾಖೆಯೂ 5,297 ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ಕಡಿಯಬೇಕಾಗುವ ಮರಗಳ ಸಂಖ್ಯೆಯನ್ನು ತಜ್ಞರ ಸಮಿತಿ 1,721ಕ್ಕೆ ಇಳಿಸಿದೆ.

ಕೆಆರ್‌ಡಿಸಿಎಲ್‌ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿಗಳಿಗಾಗಿ ತೆರವುಗೊಳಿಸಬೇಕಾಗುವ ಮರಗಳ ಕುರಿತು ಅಧ್ಯಯನ ಕೈಗೊಳ್ಳಲು ಹೈಕೋರ್ಟ್‌ ಆದೇಶದ ಮೇರೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಅನೇಕ ಬಾರಿ ಕ್ಷೇತ್ರ ಪರಿವೀಕ್ಷಣೆ ನಡೆಸಿ ಅಧ್ಯಯನ ಕೈಗೊಂಡಿರುವ ತಜ್ಞರ ಬಳಿಕ ಸಮಿತಿಯು ಉಳಿಸಿಕೊಳ್ಳಬಹುದಾದ ಹಾಗೂ ಸ್ಥಳಾಂತರ ಮಾಡಬಹುದಾದ ಮರಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಸಮಿತಿಯ ವರದಿ ಪ್ರಕಾರ, ನಗರದ ಹೊರವಲಯದಲ್ಲಿ ವಿವಿಧ ರಸ್ತೆ ವಿಸ್ತರಣೆ ಕಾಮಗಾರಿಗಳ ಸಲುವಾಗಿ ಕೆ.ಆರ್‌.ಪುರ, ಯಲಹಂಕ, ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ಮಲ್ಲೇಶ್ವರ ಹಾಗೂ ರಾಮನಗರವೂ ಸೇರಿದಂತೆ ವಿವಿಧ ಅರಣ್ಯ ವಲಯಗಳಲ್ಲಿ 2,347 ಮರಗಳು ರಸ್ತೆ ಪಕ್ಕದಲ್ಲಿವೆ.

ADVERTISEMENT

‘ಸಮಿತಿ ಸದಸ್ಯರು ಮರಗಳ ಸಮಗ್ರ ವಿಶ್ಲೇಷಣೆ ನಡೆಸುವ ಸಲುವಾಗಿ ನಿತ್ಯವೂ ಕಿಲೋಮೀಟರ್‌ಗಟ್ಟಲೆ ಅಲೆದಿದ್ದಾರೆ. ವಿಸ್ತೃತ ಅಧ್ಯಯನದಿಂದಾಗಿ ಅನೇಕ ಮರಗಳನ್ನು ಉಳಿಸಿಕೊಳ್ಳಬಹುದಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮರಗಳ ತೆರವಿಗೆ ಸಂಬಂಧಿಸಿದ ಅರ್ಜಿಯ ವಿಚಾರವಣೆ ವೇಳೆ ತನ್ನ ವಾದವನ್ನೂ ಆಲಿಸುವಂತೆ ಬೆಂಗಳೂರು ಎನ್‌ವಿರಾನ್‌ಮೆಂಟ್‌ ಟ್ರಸ್ಟ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

‘ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿ ಬೆಂಗಳೂರು ಮಹಾನಗರ ಪಾಲಿಕೆಗೆ ಸೀಮಿತವಾಗಿದೆ. ಅದು ನಗರದ ಹೊರಗಿನ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ’ ಎಂಬುದು ಕೆಆರ್‌ಡಿಸಿಎಲ್‌ ವಾದವಾಗಿತ್ತು. ಆದಾಗ್ಯೂ ಹೈಕೋರ್ಟ್, ‘ಮರಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯನ್ನು ಸಂಸ್ಥೆಯು ಪರಿಗಣಿಸದ ಕಾರಣ ವಿಸ್ತೃತ ಅಧ್ಯಯನ ನಡೆಸಿ’ ಎಂದು ಜಿಕೆವಿಕೆಗೆ ಆದೇಶ ಮಾಡಿತ್ತು.

ಸ್ಥಳಾಂತರಗೊಳಿಸಬಹುದಾದ ಮರವನ್ನು ಕಡಿದುದಕ್ಕಾಗಿ ಕೆಆರ್‌ಡಿಸಿಎಲ್‌ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್‌ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.