ADVERTISEMENT

ಕೆಆರ್‌ಐಡಿಎಲ್‌ ಮೇಲೆ ಮೋಹ: ವಾರದಲ್ಲೇ ₹469 ಕೋಟಿ ಪಾವತಿ

ಹಣ ಪಾವತಿಗೆ ಮಾಡದಂತೆ ಮುಖ್ಯಮಂತ್ರಿ ನಿರ್ದೇಶನ

ಮಂಜುನಾಥ್ ಹೆಬ್ಬಾರ್‌
Published 12 ಏಪ್ರಿಲ್ 2020, 1:43 IST
Last Updated 12 ಏಪ್ರಿಲ್ 2020, 1:43 IST
   

ಬೆಂಗಳೂರು: ನಗರದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವಾಗಲೇ ಬಿಬಿಎಂಪಿಯು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ವಾರದಲ್ಲೇ ₹469 ಕೋಟಿ ಪಾವತಿ ಮಾಡಿದೆ. ಪಾಲಿಕೆಯ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ, ಕೆಆರ್‌ಐಡಿಎಲ್‌ಗೆ ಯಾವುದೇ ಹಣ ಪಾವತಿ ಮಾಡದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಏಪ್ರಿಲ್‌ 8ರಂದು ನಿರ್ದೇಶನ ನೀಡಿದ್ದಾರೆ.

ಬಿಬಿಎಂಪಿ ಬಜೆಟ್‌ ಮಂಡಿಸಿ ಮೊದಲ ವಾರದಲ್ಲಿ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಬೇಕಿತ್ತು. ಬಿಬಿಎಂಪಿ ಬಜೆಟ್‌ ಮಂಡಿಸಿಲ್ಲ ಹಾಗೂ ಲೇಖಾನುದಾನಕ್ಕೂ ಒಪ್ಪಿಗೆ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್‌ 31ರ ಬಳಿಕ ಪಾಲಿಕೆ ಯಾವುದೇ ವೆಚ್ಚ ಮಾಡುವಂತಿಲ್ಲ. ಆದರೆ, ಮಾರ್ಚ್‌27ರಿಂದ ಏಪ್ರಿಲ್‌ 2ರ ಅವಧಿಯಲ್ಲಿ ₹469 ಕೋಟಿ ಪಾವತಿ ಮಾಡಲಾಗಿದೆ. ಏಪ್ರಿಲ್‌ 2ರಂದೇ ₹212 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಟೀಕೆ ಇದೆ.

ADVERTISEMENT

ನಗರದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿ ಪಾಲಿಕೆಗೆ ರಾಜ್ಯ ಸರ್ಕಾರ ₹8,300 ಕೋಟಿ ಅನುದಾನ ನೀಡಿದೆ. ವಾರ್ಡ್‌ ಮಟ್ಟದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕ ಪಾಲಿಕೆ ಮಾಡಿಸುತ್ತಿದೆ. ಇದಕ್ಕೆ 4ಜಿ ವಿನಾಯಿತಿ ನೀಡಲಾಗಿದೆ. 300 ಕಾಮಗಾರಿಗಳನ್ನು ನಡೆಸಲಾಗಿದೆ ಎಂಬ ಕಾರಣ ನೀಡಿ ಈಗ ತರಾತುರಿಯಲ್ಲಿ ಹಣ ಬಿಡುಗಡೆ ಮಾಡಲಾಗಿದೆ.

‘ಅನುದಾನದ ಕೊರತೆಯಿಂದಾಗಿ ಶಿವನಗರ ಮೇಲ್ಸೇತುವೆ, ಶಿವಾನಂದ ಸರ್ಕಲ್‌ ಉಕ್ಕಿನ ಸೇತುವೆ ಹಾಗೂ ಕೋರಮಂಗಲದ ಸೋನಿ ಸಿಗ್ನಲ್‌ನ ಮೇಲ್ಸೇತುವೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿಸಲು ಪಾಲಿಕೆ ವಿಳಂಬ ಮಾಡುತ್ತಿದೆ. ಆದರೆ, ಒಂದೆರಡು ತಿಂಗಳ ಹಿಂದೆ ಮಾಡಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ನಿಗಮದ ಮೇಲೆ ಅಷ್ಟೇಕೆ ಮೋಹ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

‘ನಗರದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು ಸಾವಿರಾರು ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಪಾಲಿಕೆ ಅವರ ಬಗ್ಗೆ ಗಮನ ಹರಿಸಬೇಕಿತ್ತು. ನಿಗಮಕ್ಕೆ ಹಣ ಪಾವತಿ ಸ್ವಲ್ಪ ವಿಳಂಬ ಮಾಡಿದರೂ ಸಮಸ್ಯೆ ಆಗುತ್ತಿರಲಿಲ್ಲ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಅಭಿಪ್ರಾಯಪಟ್ಟರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಾಲಿಕೆಯ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.