ADVERTISEMENT

ಕೃಷಿ ಮೇಳ: ಡಾಂಗ್‌ ತಾವ್ ಕೋಳಿ ಜೋಡಿಗೆ ₹ 65 ಸಾವಿರ!

ಕೃಷಿ ಮೇಳದಲ್ಲಿ ಕಣ್ಮನ ಸೆಳೆದ ವಿದೇಶಿ, ಆಲಂಕಾರಿಕ ಕೋಳಿಗಳು

ಖಲೀಲಅಹ್ಮದ ಶೇಖ
Published 3 ನವೆಂಬರ್ 2022, 22:13 IST
Last Updated 3 ನವೆಂಬರ್ 2022, 22:13 IST
ಡಾಂಗ್‌ ತಾವ್‌ ತಳಿ ಕೋಳಿಯ ಜೋಡಿ –ಪ್ರಜಾವಾಣಿ ಚಿತ್ರ /ಕೃಷ್ಣಕುಮಾರ್ ಪಿ.ಎಸ್.
ಡಾಂಗ್‌ ತಾವ್‌ ತಳಿ ಕೋಳಿಯ ಜೋಡಿ –ಪ್ರಜಾವಾಣಿ ಚಿತ್ರ /ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಸಣ್ಣನೆಯ ಕೊಕ್ಕು, ದಪ‍್ಪ ಕಾಲುಗಳ ಡಾಂಗ್‌ ತಾವ್ (ಡ್ರ್ಯಾಗನ್‌ ಬರ್ಡ್‌) ಹುಂಜದ ಬೆಲೆ ಕೇಳಿದರೆ ನೀವು ಹೌಹಾರುತ್ತೀರಿ. 5–6 ಕೆ.ಜಿಯಷ್ಟು ತೂಗುವ ಇದರ ಸದ್ಯದ ಮಾರುಕಟ್ಟೆ ದರ ಬರೋಬ್ಬರಿ ₹ 30 ಸಾವಿರ! ಜೋಡಿಗೆ ₹65 ಸಾವಿರ.

ಕೃಷಿ ಮೇಳದಲ್ಲಿ ಸುಮಾರು 15 ಪ್ರಕಾರದ ವಿದೇಶಿ, ಆಲಂಕಾರಿಕ (ಫ್ಯಾನ್ಸಿ) ಕೋಳಿಗಳು ನೋಡಗರ ಕಣ್ಮನ ಸೆಳೆಯುತ್ತಿವೆ.

‘ವಿಯೆಟ್ನಾಂನ ಡಾಂಗ್‌ ತಾವ್‌ ಒಂದು ಅಪರೂಪದ ತಳಿ. ಅವುಗಳಿಗೆ ದೊಡ್ಡ ಕಾಲುಗಳು. ಹೀಗಾಗಿ ಮೊಟ್ಟೆಗೆ ಕಾವು ಕೊಡಲು ಕಷ್ಟವಾಗುವುದರಿಂದ ಸಂತಾನೋತ್ಪತ್ತಿ ಮಾಡುವುದೂ ಕಷ್ಟ. ಇವುಗಳನ್ನು ಬೆಳೆಸುವಾಗ ಹೆಚ್ಚಿನ ನಿರ್ವಹಣೆ ಮಾಡಬೇಕು’ ಎಂದುರೈತ ಚೇತನಾ ಹ್ಯಾಚರೀಸ್ಸ್‌ನ ಮುಖ್ಯಸ್ಥ ಚೇತನ ಬಿ.ಸಿ ಮಾಹಿತಿ ನೀಡಿದರು.

ADVERTISEMENT

‘ಸಾಮಾನ್ಯವಾಗಿ ರೈತರು ವಾಣಿಜ್ಯ ಉದ್ದೇಶಕ್ಕೆ ಗಿರಿರಾಜ, ಕಾವೇರಿ, ಅಸೀಲ್‌ ಕ್ರಾಸ್‌, ಕಳಿಂಗ ಬ್ರೌನ್, ವೈಟ್‌ ಪೆಕಿನ್, ಖಾಕಿ ಕ್ಯಾಂಪ್‌ಬೆಲ್ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಯೆಟ್ನಾಂ, ಅಮೆರಿಕ, ಜಪಾನ್, ಮಲೇಷಿಯಾ, ಚೀನಾ, ದೇಶಗಳ ಆಲಂಕಾರಿಕ ಕೋಳಿಗಳ ಸಾಕಾಣಿಕೆ ಮಾಡುವುದು ಟ್ರೆಂಡ್‌ ಆಗಿದ್ದು, ಸದ್ಯ ಬೇಡಿಕೆ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಕೊಲಂಬಿಯನ್ ಲೈವ್‌ ಬ್ರಹ್ಮ, ಅಮೆರಿಕನ್ ಬ್ರೀಡ್‌, ಪಾಲಿಶ್ ಕ್ಯಾಬ್, ಜಪಾನಿನ ಒನಗಧಾರಿ ತಳಿಯ ಕೋಳಿ 16–18 ಗರಿಗಳನ್ನು ಹೊಂದಿರುತ್ತದೆ. ಇದರ ಬಾಲ 12 ಮೀಟರ್‌ವರೆಗೆ ಬೆಳೆದರೆ ಒಂದಕ್ಕೆ ₹ 30 ಸಾವಿರ ಬೆಲೆ ಬರುತ್ತದೆ. ಇವುಗಳ ತಳಿ ವೃದ್ಧಿ ಮಾಡುವುದಕ್ಕೆ ಸಾಕಾಣಿಕೆ ಮಾಡಬಹುದು. ಪೋಲಿಷ್‌ ಕ್ಯಾಪ್‌ ಕೋಳಿಯ ತಲೆಯ ಭಾಗದ ಮೇಲೆ ಬಿಳಿ ಟೊಪ್ಪಿಗೆ ಇರುತ್ತದೆ. ಸಿರಾಮ್ ವಿಶ್ವದ ಅತಿ ಚಿಕ್ಕ ಕೋಳಿಯಾಗಿದೆ. ಆಲಂಕಾರಿಕ ಕೋಳಿಗಳಿಗೆ ಬೇರೆ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದೆ. ಇವುಗಳ ತಳಿ ಅಭಿವೃದ್ಧಿ ಮಾಡುವವರ ಸಂಖ್ಯೆ ಬಹಳ ಕಡಿಮೆ. ಎಲ್ಲಾ ಹವಾಮಾನಕ್ಕೂ ಹೊಂದಿಕೊಳ್ಳುವಂತಹ ಕೋಳಿಗಳಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.