ADVERTISEMENT

ಲೋಕಾಯುಕ್ತ ಅಧಿಕಾರಿಗಳಿಂದ ಕರ್ತವ್ಯ ಲೋಪ ಆರೋಪ: ಕೆಆರ್‌ಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:15 IST
Last Updated 14 ಮಾರ್ಚ್ 2023, 4:15 IST
ಸ್ವಾತಂತ್ರ್ಯ ಉದ್ಯಾನದಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು
ಸ್ವಾತಂತ್ರ್ಯ ಉದ್ಯಾನದಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು   

ಬೆಂಗಳೂರು: ಲಂಚ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್ ಅವರನ್ನು ಬಂಧಿಸದೆ ಜಾಮೀನಿನ ಮೇಲೆ ಹೊರಗೆ ಬರುವಂತೆ ಲೋಕಾಯುಕ್ತ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್‌) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕೆಆರ್‌ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘2023ರ ‌ಜ.2 ರಂದು ಲೋಕಾಯುಕ್ತ ಅಧಿಕಾರಿಗಳು ಮಾಗಡಿಯ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಕಚೇರಿ ಮೇಲೆ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಏಜೆಂಟ್‌ ಒಬ್ಬನನ್ನು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿ ಶ್ರೀನಿವಾಸ ಪ್ರಸಾದ್ ಬಂಧನವಾಗಲೇ ಇಲ್ಲ. ನಿರೀಕ್ಷಣಾ ಜಾಮೀನು ಸಿಗುವ ತನಕ ಬಂಧಿಸದೆ ಕರ್ತವ್ಯ ಲೋಪ ಎಸಗಿದರು. ಅಲ್ಲದೇ, ಆರೋಪಿಯಿಂದ ಲಂಚ ಪಡೆದಿರುವ ಸಾಧ್ಯತೆಯೂ ಇದೆ’ ಎಂದು ರವಿ ಕೃಷ್ಣಾರೆಡ್ಡಿ ದೂರಿದರು.

ADVERTISEMENT

‘ಶಾಸಕ ಮಾಡಳ್ ವಿರೂಪಾಕ್ಷಪ್ಪ ಪ್ರಕರಣದಲ್ಲೂ ತಂದೆಯ ಹೆಸರಿನಲ್ಲಿ ಲಂಚ ಪಡೆದ ಮಗನನ್ನು ಬಂಧಿಸಲಾಯಿತು. ಪ್ರಮುಖ ಆರೋಪಿ ವಿರೂಪಾಕ್ಷಪ್ಪ ಅವರನ್ನು ಬಂಧಿಸುವ ಪ್ರಯತ್ನ ಮಾಡದೆ ಕಾಲಹರಣ ಮಾಡಿದರು. ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ವಿಚಾರಣೆಗೆ ಲೋಕಾಯುಕ್ತದ ಹಿರಿಯ ವಕೀಲರು ಗೈರಾದರು. ಇದೆಲ್ಲದರ ಪರಿಣಾಮವಾಗಿ ಆರೋಪಿಗೆ ಜಾಮೀನು ಸಿಕ್ಕಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಎರಡು ಪ್ರಕರಣಗಳು ಲೋಕಾಯುಕ್ತ ಸಂಸ್ಥೆಗೆ ಕಳಂಕ ತಂದಿವೆ. ಮಾಡಾಳ್‌ ವಿರೂಪಾಕ್ಷಪ್ಪ ಅವರ ಮೆರವಣಿಗೆಯಂತೂ ರಾಜ್ಯದ ಜನರಿಗೆ ಮಾಡಿದ ಅವಮಾನ. ರಾಜ್ಯದ ಜನರ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಯಿತು. ಇದಕ್ಕೆ ಲೋಕಾಯುಕ್ತ ಸಂಸ್ಥೆಯೇ ಹೊಣೆ. ಜನರ ವಿಶ್ವಾಸವನ್ನು ಮರಳಿ ಪಡೆಯುವ ಕೆಲಸವನ್ನು ಸಂಸ್ಥೆ ಪ್ರಾಮಾಣಿಕವಾಗಿ ಮಾಡಬೇಕು. ಆಗದಿದ್ದರೆ ರಾಜೀನಾಮೆ ನೀಡಬೇಕು’ ಎಂದು ಲೋಕಾಯುಕ್ತರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಬಳಿಕ ಕಾರ್ಯಕರ್ತರು ಲೋಕಾಯುಕ್ತ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.