ADVERTISEMENT

ಕೆಎಸ್‌ಡಿಎಲ್‌ ಅಧಿಕಾರಿ ಆತ್ಮಹತ್ಯೆ: ಕೌಟುಂಬಿಕ ಕಲಹ ಕಾರಣ?

ಸ್ಥಳದಲ್ಲಿ ಮರಣ ಪತ್ರ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 14:41 IST
Last Updated 30 ಡಿಸೆಂಬರ್ 2024, 14:41 IST
ಅಮೃತ್‌ 
ಅಮೃತ್‌    

ಬೆಂಗಳೂರು: ಕರ್ನಾಟಕ ಸೋಪ್ಸ್ ಆ್ಯಂಡ್‌ ಡಿಟರ್ಜೆಂಟ್ಸ್‌ನ(ಕೆಎಸ್‌ಡಿಎಲ್‌) ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮೃತ್‌ ಶಿರೂರ್‌ (40) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಕೌಟುಂಬಿಕ ಕಲಹದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಅಮೃತ್ ಅವರು ಕೆಎಸ್‌ಡಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮಿ ಲೇಔಟ್‌ನ ಮುನೇಶ್ವರ ಬ್ಲಾಕ್‌ನ 4ನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಡಿ.28ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ತಡವಾಗಿ ಗೊತ್ತಾಗಿದೆ.

ADVERTISEMENT

‘ತಮ್ಮ ಮನೆಯಲ್ಲಿ ಬಾಡಿಗೆ ಇದ್ದ ಅಮೃತ್‌ ಅವರು ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮನೆ ಮಾಲೀಕ ಗಿರೀಶ್ ದೂರು ನೀಡಿದ್ದಾರೆ. ಬಿಎನ್‌ಎಸ್‌ಎಸ್‌ ಕಲಂ 194 ಅಡಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

‘ಹತ್ತು ವರ್ಷದಿಂದ ಕೆಎಸ್‌ಡಿಎಲ್‌ನಲ್ಲಿ ಅಮೃತ್ ಅವರು ಕೆಲಸ ಮಾಡುತ್ತಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಅವರು ಎರಡನೇ ಮದುವೆ ಆಗಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು, ಎರಡನೇ ಪತ್ನಿಗೂ ವಿಚ್ಛೇದನ ನೀಡಲು ಮುಂದಾಗಿದ್ದರು. ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿದ್ದು, ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಮಾನಸಿಕವಾಗಿ ನೊಂದಿದ್ದರು’ ಎಂದು ಪೊಲೀಸರು ಹೇಳಿದರು.

ಮರಣ ಪತ್ರ ಪತ್ತೆ: ಸ್ಥಳದಲ್ಲಿ ಮರಣ ಪತ್ರ ಲಭಿಸಿದೆ. ಕೈಯಲ್ಲಿ ಮರಣ ಪತ್ರವನ್ನು ಹಿಡಿದುಕೊಂಡೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ತಂದೆ–ತಾಯಿಗೆ ಒಳ್ಳೆಯ ಮಗನಾಗಲಿಲ್ಲ. ಪತ್ನಿಗೆ ಒಳ್ಳೆಯ ಗಂಡನಾಗಲಿಲ್ಲ. ನನ್ನ ಸಾವಿಗೆ ನಾನೇ ಕಾರಣ, ಯಾರೂ ಕಾರಣರಲ್ಲ’ ಎಂದು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮರಣ ಪತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಘಟನಾ ಸ್ಥಳ ಪರಿಶೀಲಿಸಿದಾಗ ಯಾವುದೇ ಸಂಶಯ ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಅಮೃತ್ ಶವ ಸ್ಥಳಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಆಧಾರದಲ್ಲಿ ತನಿಖೆ ಮಾಡಲಾಗುವುದು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.